ಮಡಿಕೇರಿ, ಡಿ. ೧೦: ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್ ಅವರು ಸೇನಾ ಜಿಲ್ಲೆ ಎಂದೆನಿಸಿರುವ ಕೊಡಗಿನ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು. ಈ ಉನ್ನತ ಸೇನಾಧಿಕಾರಿಗೆ ಕೊಡಗಿನ ಹಲವು ನಿವೃತ್ತ ಸೇನಾ ಅಧಿಕಾರಿಗಳ ನಿಕಟ ಸಂಪರ್ಕವೂ ಇತ್ತು. ೨೦೧೬ರಿಂದ ಈತನಕ ಮೂರು ಬಾರಿ ಕೊಡಗಿಗೆ ಆಗಮಿಸಿದ್ದ ಬಿಪಿನ್ ರಾವತ್ ಅವರು ಕೊಡಗಿನ ಸೇನಾನಿಗಳ ಹಲವು ಮನವಿ - ಬೇಡಿಕೆಗಳಿಗೆ ಎಂದೂ ಇಲ್ಲ ಎಂದಿರಲಿಲ್ಲ. ಎಲ್ಲದಕ್ಕೂ ಸಕಾರಾತ್ಮಕವಾಗಿಯೇ ಸ್ಪಂದಿಸಿರುವ ಇವರು ಇನ್ನಷ್ಟು ಕೊಡುಗೆಯನ್ನೂ ಕೊಡಗಿಗೆ ನೀಡಲು ಸಿದ್ಧರಿದ್ದರು. ಇವರ ಒಡನಾಟ, ಕೊಡಗಿಗೆ ನೀಡಿದ ಸಹಕಾರ - ಸ್ಪಂದನದ ಕುರಿತಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಸಂಚಾಲಕರಾಗಿರುವ ನಿವೃತ್ತ ಮೇಜರ್ ಬಿದ್ದಂಡ ನಂದಾ ನಂಜಪ್ಪ ಅವರು ‘ಶಕ್ತಿ’ಯೊಂದಿಗೆ ಮೆಲುಕು ಹಾಕಿದ್ದು, ಸೇನಾಧಿಕಾರಿಯ ದುರಂತ ಸಾವಿನ ಬಗ್ಗೆ ಫೋರಂನ ಪರವಾಗಿ ಕಂಬನಿ ಮಿಡಿದಿದ್ದಾರೆ.
೨೦೧೬ರಲ್ಲಿ ಪ್ರಥಮ ಭೇಟಿ
ಬಿಪಿನ್ ರಾವತ್ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದಾಗ ೨೦೧೬ರಲ್ಲಿ ಬಿಟ್ಟಂಗಾಲದಲ್ಲಿ ಸದರ್ನ್ ಕಮಾಂಡ್ ಗಾಲ್ಫ್ ಟೂರ್ನಿಯನ್ನು ಆಯೋಜಿಸಿದ್ದರು. ಇಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅವರು ತಮ್ಮೊಂದಿಗೆ ಒಡನಾಡಿಯಾಗಿದ್ದ ಜಿಲ್ಲೆಯ ನಿವೃತ್ತ ಅಧಿಕಾರಿಗಳ ಜೊತೆಗಿನ ಮುಕ್ತ ಚರ್ಚೆಯಲ್ಲಿ ಸದ್ಯದಲ್ಲಿ ಭೂಸೇನಾ ಮುಖ್ಯಸ್ಥರನ್ನು ಜಿಲ್ಲೆಗೆ ಕರೆತರುವ ಆಶ್ವಾಸನೆ ನೀಡಿದ್ದರು. ಇದರಂತೆ ಮುಂದಿನ ವರ್ಷವೇ ೨೦೧೭ರಲ್ಲಿ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರನ್ನು ಕರೆತಂದ ರಾವತ್ ಅವರು, ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ನಲ್ಲಿ ಸೈನಿಕ ಸಮ್ಮೇಳನವೊಂದನ್ನು ಜನರಲ್ ನೇತೃತ್ವದಲ್ಲಿ ಆಯೋಜಿಸುವಲ್ಲಿ ಪಾತ್ರಧಾರಿಯಾಗಿದ್ದರು. ಈ ಸಮ್ಮೇಳನದ ಸಂದರ್ಭದಲ್ಲಿ ಈ ಇಬ್ಬರು ಅಧಿಕಾರಿಗಳು ನಿವೃತ್ತ ಲೆ.ಜ. ಕೋದಂಡ ಸೋಮಣ್ಣ ಅವರ ನಿವಾಸಕ್ಕೂ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದ್ದು ವಿಶೇಷವಾಗಿತ್ತು. ಸೋಮಣ್ಣ ಅವರು ಕ್ಯಾಪ್ಟನ್ ಆಗಿದ್ದಾಗ ೩೧೧ ಗೂರ್ಖಾಸ್‌ನಲ್ಲಿ ರಾವತ್ ಅವರ ಅಜ್ಜ ಕರ್ನಲ್ ಆಗಿದ್ದರು. ಆಗಿನ ಅವರ ಸಂಬAಧದ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಇದ್ದ ಸೋಮಣ್ಣ ಅವರ ನಿವಾಸಕ್ಕೆ ಇವರುಗಳು ಭೇಟಿ ನೀಡಿದ್ದರು.
ಇದೇ ಸಂದರ್ಭ ಆಗ ಇನ್ನೂ ಮುಕ್ತಾಯ ಕಾಣದಿದ್ದ ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್)ಗೆ ಭೇಟಿ ನೀಡಿದ್ದರು. ಅಲ್ಲಿ ನಂದಾ ನಂಜಪ್ಪ ಸೇರಿದಂತೆ ಪ್ರಮುಖರೊಂದಿಗೆ ಚರ್ಚಿಸಿದ್ದ ಅವರು, ಗೋಣಿಕೊಪ್ಪದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಪ್ರತಿಮೆ ಸ್ಥಾಪನೆಗೆ ಆರ್ಥಿಕ ನೆರವನ್ನೂ ಫೋರಂ ಪದಾಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಈ ಪ್ರತಿಮೆಗಳ ಉದ್ಘಾಟನೆಗೆ ಆಹ್ವಾನಿಸಿದಲ್ಲಿ ಆಗಮಿಸುವ ಭರವಸೆ ನೀಡಿದ್ದರು.
೨೦೧೯ರ ಏಪ್ರಿಲ್ ೪ರಂದು ಗೋಣಿಕೊಪ್ಪದಲ್ಲಿ ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳ ಅನಾವರಣಕ್ಕೂ ಆಗ ಜನರಲ್ ಆಗಿದ್ದ ಬಿಪಿನ್ ರಾವತ್ ಖುದ್ದಾಗಿ ಆಗಮಿಸಿದ್ದರು.
ರಾಷ್ಟçಪತಿ ಕರೆತರುವ ಭರವಸೆ
ಗೋಣಿಕೊಪ್ಪದಲ್ಲಿನ ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ಫೋರಂನ ಮನವಿಗೆ ಸ್ಪಂದಿಸಿದ್ದ ರಾವತ್ ಅವರು ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾದ ರಾಷ್ಟçಪತಿಗಳನ್ನು ಕರೆತರುವ
(ಮೊದಲ ಪುಟದಿಂದ) ಆಶ್ವಾಸನೆಯನ್ನೂ ನೀಡಿದ್ದರು. ಇಲ್ಲಿನ ಕೆಲಸ ಪೂರ್ಣಗೊಂಡ ಬಳಿಕ ನಡೆದ ಪತ್ರ ವ್ಯವಹಾರದಂತೆ ರಾವತ್ ಅವರು ತ್ವರಿತವಾಗಿ ಸ್ಪಂದಿಸಿ (ಆ ಸಂದರ್ಭ ಅವರು ಸಿ.ಡಿ.ಎಸ್. ಆಗಿದ್ದರು) ಕೇವಲ ೧೫ ದಿವಸಗಳಲ್ಲಿ ರಾಷ್ಟçಪತಿಗಳ ಭೇಟಿಯ ದಿನಾಂಕ ನಿಗದಿಪಡಿಸಿ ತಾವೂ ಕೂಡ ಪತ್ನಿ ಮಧುಲಿಕಾ ರಾವತ್‌ರೊಂದಿಗೆ ಆಗಮಿಸಿದ್ದರು ಎಂದು ನಂದಾ ಸ್ಮರಿಸಿಕೊಂಡರು. ಇದಕ್ಕೆ ಪೂರ್ಣ ಸಹಕಾರವನ್ನು ಅವರು ಒದಗಿಸಿದ್ದರು.
ಅಪರೂಪದ ಕೊಡುಗೆ
ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಆಗಮಿಸಿದ್ದ ರಾವತ್ ಅವರು, ಅಪರೂಪದ ಕೊಡುಗೆಯೊಂದನ್ನು ತಮ್ಮೊಂದಿಗೆ ತಂದಿದ್ದರು. ಈ ಹಿಂದೆ ಲಾರ್ಡ್ ಮೌಂಟ್ ಬ್ಯಾಟನ್ ಅವರು ಜನರಲ್ ಕಿಬ್ಬರ್ ಅವರಿಗೆ ತಿಮ್ಮಯ್ಯ ಅವರ ಕುರಿತಾಗಿ ಬರೆದಿದ್ದ ಪತ್ರ ಇದಾಗಿದೆ. ಈ ಪತ್ರದಲ್ಲಿ ‘‘ಜನರಲ್ ತಿಮ್ಮಯ್ಯ ಅವರು ನಿವೃತ್ತರಾದ ಬಳಿಕ ಅವರನ್ನು ಭಾರತ ರಕ್ಷಣಾ ಪಡೆಯ ಸಿ.ಡಿ.ಎಸ್. ಆಗಿ ನೇಮಕ ಮಾಡುವಂತೆ ತಾವು ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಸಲಹೆ ನೀಡಿದ್ದೆ. ಆದರೆ ಇದನ್ನು ಅವರು ಪರಿಗಣಿಸಿರಲಿಲ್ಲ. ಒಂದು ವೇಳೆ ತಿಮ್ಮಯ್ಯ ಅವರನ್ನು ಸಿ.ಡಿ.ಎಸ್. ಆಗಿ ನೇಮಕ ಮಾಡಿದ್ದಲ್ಲಿ ಚೈನಾ ಭಾರತದೊಂದಿಗೆ ಆಟವಾಡುತ್ತಿರಲಿಲ್ಲ ಎಂಬ ಉಲ್ಲೇಖವಿದೆ’’ ಈ ಪತ್ರವನ್ನು ತಿಮ್ಮಯ್ಯ ಮ್ಯೂಸಿಯಂನ ಮುಂಭಾಗದ ಕೊಠಡಿಯಲ್ಲಿ ಇರಿಸಲಾಗಿದೆ. ಇದೂ ಕೂಡ ರಾವತ್ ಅವರ ಸ್ಮರಣೆಯಾಗಿದೆ ಎಂದು ನಂಜಪ್ಪ ವಿವರಿಸಿದರು.
ಕರ್ನಲ್ ಸುಬ್ಬಯ್ಯ ಬೇಸರ
ಬಿಪಿನ್ ರಾವತ್ ಅವರು ಕೊಡಗಿನ ಬಗ್ಗೆ ಹೊಂದಿದ್ದ ಅಪಾರ ಪ್ರೀತಿಯ ಬಗ್ಗೆ ಸ್ಮರಿಸಿರುವ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತAಡ ಸಿ.ಸುಬ್ಬಯ್ಯ ಅವರು ಇವರ ನಿಧನ ಕೊಡಗು ಹಾಗೂ ಫೋರಂಗೆ ಭಾರೀ ನಷ್ಟವಾದಂತಾಗಿದೆ ಎಂದಿದ್ದಾರೆ. ತಮ್ಮ ಎಲ್ಲಾ ಮನವಿಗಳನ್ನೂ ಅವರು ಈಡೇರಿಸಿದ್ದರು. ಫೀ.ಮಾ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವಂತೆಯೂ ರಾವತ್ ಆಗ್ರಹಿಸಿದ್ದರು ಎಂದು ಸ್ಮರಿಸಿದ್ದಾರೆ.
-ಶಶಿ ಸೋಮಯ್ಯ