ಸೋಮವಾರಪೇಟೆ, ಡಿ. ೯: ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಎಂದು ಸುಳ್ಳು ಹೇಳಿ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಪಿನ್ ನಂಬರ್ ಪಡೆದು ಪಂಗನಾಮ ಹಾಕುತ್ತಿರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಇದೀಗ ತಾನು ಭಾರತೀಯ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಕೆಲ ಫೋಟೋಗಳನ್ನು ಕಳುಹಿಸಿ ಹಣ ಲಪಟಾಯಿಸಲು ಯತ್ನಿಸಿದ ಘಟನೆ ಸಮೀಪದ ಐಗೂರಿನಲ್ಲಿ ನಡೆದಿದೆ.

ಐಗೂರಿನಲ್ಲಿ ಕೋಳಿ ಮಾಂಸದ ಅಂಗಡಿ ಇಟ್ಟುಕೊಂಡಿರುವ ಯುವಕನೋರ್ವನಿಗೆ ಕರೆ ಮಾಡಿದ ವ್ಯಕ್ತಿಯೋರ್ವ, ತಾನು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಬಂದೋಬಸ್ತ್ಗಾಗಿ ಬಂದಿದ್ದು, ೧೦ ಕೆ.ಜಿ. ಕೋಳಿ ಮಾಂಸ ಬೇಕಿದೆ ಎಂದು ಹಿಂದಿ ಭಾಷೆಯಲ್ಲಿ ಕರೆ ಮಾಡಿ ತಿಳಿಸಿದ್ದಾನೆ.

ನಿಮ್ಮ ಊರಿನಿಂದ ಕೇವಲ ೫ ಕಿ.ಮೀ. ದೂರದಲ್ಲಿ ಚುನಾವಣಾ ಕರ್ತವ್ಯಕ್ಕೆ ಬಂದಿದ್ದು, ಮಾಂಸ ತಯಾರಾದೊಡನೆ ತಿಳಿಸಿದರೆ ಹಣ ವರ್ಗಾಯಿಸುತ್ತೇನೆ. ನಂತರ ಬಂದು ಮಾಂಸ ಪಡೆಯುತ್ತೇನೆ ಎಂದು ತಿಳಿಸಿದ್ದಾನೆ. ಹೇಗಿದ್ದರೂ ಸೈನಿಕರಲ್ಲವೇ. ಆ ನಂತರ ಬಂದು ಮಾಂಸ ಖರೀದಿಸುತ್ತಾರೆ ಎಂದು ನಂಬಿದ ಕೋಳಿ ಅಂಗಡಿಯ

(ಮೊದಲ ಪುಟದಿಂದ) ಯುವಕ, ಒಂದು ಕೆ.ಜಿ. ಮಾಂಸಕ್ಕೆ ೧೮೦ ರೂಪಾಯಿಯಂತೆ ಮಾತುಕತೆ ನಡೆಸಿ, ೧೦ ಕೆ.ಜಿ.ಯಷ್ಟು ಮಾಂಸ ಮಾಡಿ ವಾಪಸ್ ಕರೆ ಮಾಡಿದ್ದಾನೆ. ಈ ಸಂದರ್ಭ ತಾನು ಬರುವುದು ಸ್ವಲ್ಪ ತಡವಾಗಲಿದೆ. ನಿಮ್ಮ ಎಟಿಎಂ ಕಾರ್ಡ್ನ ಚಿತ್ರ ಕಳುಹಿಸಿದರೆ ಹಣ ವರ್ಗಾಯಿಸುತ್ತೇನೆ ಎಂದು ಅತ್ತಲಿನ ವ್ಯಕ್ತಿ ತಿಳಿಸಿದ್ದಾನೆ.

ಇದಕ್ಕೆ ಅಂಗಡಿಯಾತ ಒಪ್ಪದೇ ಇಲ್ಲೇ ಬಂದು ಮಾಂಸ ತೆಗೆದುಕೊಂಡು ಹಣ ನೀಡಿ ಎಂದು ಸಲಹೆ ನೀಡಿದ್ದಾನೆ. ಈ ಸಂದರ್ಭ ತನ್ನ ಮೇಲೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ ನಕಲಿ ಸೈನಿಕ, ಭಾರತೀಯ ಸೈನ್ಯದ ಸಮವಸ್ತç ಧರಿಸಿರುವ ಹೊರ ರಾಜ್ಯದ ಸೈನಿಕನೋರ್ವನ ಭಾವಚಿತ್ರ, ಎಟಿಎಂ, ಆರ್ಮಿ ಲಿಕ್ಕರ್ ಕಾರ್ಡ್ಗಳ ಫೋಟೋವನ್ನು ವಾಟ್ಸಾಪ್ ಮಾಡಿದ್ದಾನೆ.

ಹಣ ವರ್ಗಾಯಿಸಲು ಗೂಗಲ್ ಪೇ/ ಫೋನ್ ಪೇ/ ಅಥವಾ ಖಾತೆಯ ಸಂಖ್ಯೆ ಸಾಕಲ್ಲವೇ? ಎಟಿಎಂನ ಭಾವಚಿತ್ರ ಯಾಕೆ? ಎಂದು ಸಂಶಯ ವ್ಯಕ್ತಪಡಿಸಿದ ಅಂಗಡಿಯಾತ, ತನ್ನ ಎಟಿಎಂ ಕಾರ್ಡ್ನ ಚಿತ್ರ ಕಳುಹಿಸಲು ಹಿಂದೇಟು ಹಾಕಿದ್ದಾನೆ.

ಇದರೊಂದಿಗೆ ಸ್ಥಳೀಯರೊಂದಿಗೆ ಈ ವಿಚಾರ ಪ್ರಸ್ತಾಪಿಸಿದ್ದಾನೆ. ಐಗೂರು ಸುತ್ತಮುತ್ತಲಿನ ಯಾವುದೇ ಬೂತ್‌ನಲ್ಲೂ ಭಾರತೀಯ ಸೈನಿಕರು ಬಂದೋಬಸ್ತ್ಗೆ ಬಂದಿಲ್ಲ. ಇದೊಂದು ಮೋಸದ ಜಾಲ ಇರಬಹುದು ಎಂದು ಮನವರಿಕೆ ಮಾಡಿದ್ದಾರೆ. ಆನ್‌ಲೈನ್ ಹಾಗೂ ನಕಲಿ ಐ.ಡಿ.ಗಳ ಮೂಲಕ ಹಣ ಲಪಟಾಯಿಸುವ ಬೃಹತ್ ಜಾಲವೇ ಕಾರ್ಯಾಚರಿಸುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಟ್ರೂ ಕಾಲರ್‌ನಲ್ಲಿ ಅಂಗಡಿಯ ಹೆಸರು (ಉದಾ: ಪ್ರಾವಿಷನ್ ಸ್ಟೋರ್, ಪೆಟ್ರೋಲ್ ಬಂಕ್ ಇತ್ಯಾದಿ) ಬರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು, ಕೆಲವೊಂದು ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಹಣ ಲಪಟಾಯಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕಿದೆ. - ವಿಜಯ್