ಶನಿವಾರಸಂತೆ, ಡಿ. ೮: ಹೋಬಳಿಯಾದ್ಯಂತ ವರುಣದೇವನ ವಿಶ್ರಾಂತಿಯಿAದ ಸೂರ್ಯದೇವನ ಆಗಮನವಾಗಿ ಬಿಸಿಲಿನ ವಾತಾ ವರಣದಿಂದ ರೈತರು ಕೃಷಿ ಚಟುವಟಿ ಕೆಯಲ್ಲಿ ಚುರುಕುಗೊಂಡಿದ್ದಾರೆ. ಗದ್ದೆಗಳಲ್ಲಿ ಭತ್ತದ ಕಟಾವು ಕಾರ್ಯ ಬಿರುಸು ಕಂಡಿದೆ.
ಗದ್ದೆಗಳಲ್ಲಿ ನೀರು ನಿಂತಿದ್ದು, ಕಟಾವು ಯಂತ್ರವನ್ನು ಗದ್ದೆಯೊಳಗೆ ಇಳಿಸುವಂತಿಲ್ಲ. ಕೂಲಿ ಕಾರ್ಮಿಕರೇ ಪೈರನ್ನು ಕಟಾವು ಮಾಡಿ ಕಣಕ್ಕೆ ಸಾಗಿಸಿ ಭತ್ತ ಬೇರ್ಪಡಿಸುವ ಯಂತ್ರಕ್ಕೆ ಹಾಕುವ ಕಾರ್ಯ ನಡೆದಿದೆ.
ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. ೬೦ ರಷ್ಟು ಗದ್ದೆಗಳಲ್ಲಿ ರೈತರು ಭತ್ತದ ಬೇಸಾಯ ಮಾಡಿದ್ದಾರೆ. ಅಲ್ಪಾವಧಿ ಅವಧಿಯ ೩ ತಿಂಗಳ ಬೆಳೆಯಾದ ಅಮೋಘ, ವಿಎನ್ಆರ್, ತುಂಗಾ, ಇಂಟಾನ್, ರಾಜಮುಡಿ, ಸಣ್ಣಮಧು ಇತ್ಯಾದಿ ಭತ್ತದ ತಳಿಯನ್ನು ಬೆಳೆದಿದ್ದಾರೆ.
ದೀರ್ಘಾವಧಿಯ ೬ ತಿಂಗಳ ಬೆಳೆ ಚಿಪ್ಪುಗ ಭತ್ತವನ್ನು ಕೆಲ ರೈತರು ಬೆಳೆದಿದ್ದಾರೆ. ಇದು ಮಂಡಕ್ಕಿ ತಯಾರಿಸುವ ಭತ್ತವಾಗಿದೆ.
ಅಕಾಲಿಕ ಮಳೆಯ ಕಾರಣ ಶೇ. ೫ ರಷ್ಟು ಗದ್ದೆಗಳಲ್ಲಿ ಕಟಾವು ಕೆಲಸ ಮುಗಿದಿದೆ. ಇದೀಗ ಬಿಸಿಲಾಗಿದ್ದು ಮಳೆಯಿಂದ ಉದುರಿ ಹೋಗಿ ಉಳಿದಿರುವ ಭತ್ತವನ್ನು ಕಟಾವು ಮಾಡಿ ರೈತರು ಮನೆಯ ಕಣಜ ತುಂಬಿಸಿಕೊಳ್ಳುವ ಆತುರದಲ್ಲಿದ್ದಾರೆ. ವಿಪರ್ಯಾಸವೆಂದರೆ ಕಟಾವು ಯಂತ್ರ ಗದ್ದೆಗೆ ಇಳಿಯುವಂತಿಲ್ಲ. ಕೂಲಿ ಕಾರ್ಮಿಕರ ಕೊರತೆ ಗಂಭೀರ ಸಮಸ್ಯೆಯಾಗಿದೆ. ಕಾಫಿ ತೋಟಗಳಲ್ಲಿ ಕಾಫಿ ಹಣ್ಣು ಕುಯ್ಯುವ, ನೆಲಕ್ಕೆ ಉದುರಿದ ಹಣ್ಣು ಹೆಕ್ಕುವ ಕೆಲಸವೂ ನಡೆದಿದ್ದು, ಹೆಚ್ಚಿನ ಸಂಬಳದ ಆಸೆಗೆ ಕೂಲಿ ಕಾರ್ಮಿಕರು ತೋಟದತ್ತ ಮುಖ ಮಾಡಿದ್ದಾರೆ. ಭತ್ತದ ಕಟಾವಿಗೆ ಕೂಲಿ ಕಾರ್ಮಿಕರು ಬಾರದೇ ರೈತರು ಪರದಾಡುವಂತಾಗಿದೆ.
ದುAಡಳ್ಳಿ ಗ್ರಾಮದಲ್ಲಿ ಬಹುತೇಕ ರೈತರು ಭತ್ತದ ಕಟಾವಿಗೆ ಕಾರ್ಮಿಕರು ಸಿಗದೇ ಅಸಹಾಯಕರಾಗಿದ್ದಾರೆ. ಭತ್ತ ಕಟಾವಿಗಿಂತಲೂ ಕಾಫಿ ಹಣ್ಣು ಕುಯ್ಯುವ ಕೆಲಸ ಕಷಷ್ಟಕರವಲ್ಲ ಎಂದು ಕಾರ್ಮಿಕರು ಆ ಕೆಲಸಕ್ಕೆ ಹೋಗುತ್ತಿದ್ದಾರೆ. ಭತ್ತದ ಕಟಾವಿಗೆ ಕೂಲಿ ರೂ. ೨೫೦. ಕಾಫಿ ಕುಯ್ಲಿಗೆ ರೂ. ೩೦೦ ದರವಿದೆ ಎಂದು ದುಂಡಳ್ಳಿ ಗ್ರಾಮದ ಯುವ ಕೃಷಿಕ ಯೋಗೇಂದ್ರ ಬೇಸರ ವ್ಯಕ್ತಪಡಿಸಿದರು.
ಈ ವಿಭಾಗದಲ್ಲಿ ವರ್ಷವಿಡಿ ಸುರಿದ ಅಕಾಲಿಕ ಮಳೆ ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಕೃಷಿಯನ್ನೇ ಅವಲಂಭಿಸಿರುವ ರೈತರು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹವಾಮಾನ ವೈಪರೀತ್ಯ ರೈತರ ಬದುಕಿನಲ್ಲಿ ಕಣ್ಣಾಮುಚ್ಚಾಲೆ ಯಾಡುತ್ತಿದೆ. ಕಾಫಿ, ಕಾಳುಮೆಣಸು, ಅಡಿಕೆ ಜೊತೆಗೆ ಭತ್ತದ ಬೆಳೆಯೂ ನಾಶವಾಗಿದೆ. ಮುಂದಿನ ದಿನಗಳಲ್ಲಿ ರೈತರ ಜೀವನ ನಿರ್ವಹಣೆ ಗಂಭೀರ ಸಮಸ್ಯೆಯಾಗಿದೆ. ಕೃಷಿ ನಿರ್ವಹಣೆ ಕಷ್ಟಕರ ಎಂದು ಯೋಗೇಂದ್ರ ಅಳಲು ತೋಡಿ ಕೊಂಡರು.
- ನರೇಶ್ಚಂದ್ರ.