ಶನಿವಾರಸAತೆ, ಡಿ. ೮: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ರೂ. ೩೩,೮೬,೦೩೧ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಹೇಳಿದರು.

ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್ ಮಾತನಾಡಿ, ಸಂಘದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಹಾಗೂ ಸಂಘದಲ್ಲಿ ಠೇವಣಿ ವ್ಯವಹಾರ, ಗೊಬ್ಬರ ಖರೀದಿ ವ್ಯವಹಾರ ಮಾಡುವಂತೆ ಮನವಿ ಮಾಡಿ, ಸಾಲಗಳ ಮೇಲಿನ ಬಡ್ಡಿಯನ್ನು ಶೇ. ೧೩ ರಿಂದ ಶೇ. ೧೦ ಕಡಿಮೆ ಮಾಡಿ ಆಭರಣ ಸಾಲ ಶೇ. ೯ ಕಡಿಮೆ ಮಾಡಿರುವುದನ್ನು ಘೋಷಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಈ. ದೊಡ್ಡಯ್ಯ ವಾರ್ಷಿಕ ವರದಿ ಮಂಡನೆ ಮಾಡಿದರು. ಸಂಘ ೨೩.೫.೧೯೯೧ ರಲ್ಲಿ ಸ್ಥಾಪನೆಯಾಗಿದ್ದು ೨೨೬೬ ಮಂದಿ ಸದಸ್ಯರಿಂದ ರೂ. ೧,೨೫,೪೬,೪೫೬ ಪಾಲು ಹಣ ಹೊಂದಿರುತ್ತದೆ. ಸಂಘದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಂದ ರೂ. ೧೫,೩೬,೭೯,೯೪೮ ಠೇವಣಿಯನ್ನು ಪಡೆಯಲಾಗಿದ್ದು ವಿವಿಧ ಸಾಲಗಳ ರೂಪದಲ್ಲಿ ಸದಸ್ಯರು ಮತ್ತು ಸದಸ್ಯೇತರರಿಗೆ ರೂ. ೧೮,೫೮,೨೧,೮೮೩ ಸಾಲ ವಿತರಣೆ ಮಾಡಲಾಗಿದೆ. ಸಂಘದಲ್ಲಿ ಕಳೆದ ಮಹಾಸಭೆಯಿಂದ ಇಲ್ಲಿಯವರೆಗೆ ೩೦ ಜನ ಮೃತಪಟ್ಟ ಸದಸ್ಯರ ವಾರಸುದಾರರಿಗೆ ತಲಾ ರೂ. ೧೦,೦೦೦ ಗಳಂತೆ ಮರಣ ನಿಧಿಯನ್ನು ಪಾವತಿಸಲಾಗಿದೆ. ನಬಾರ್ಡ್ ವತಿಯಿಂದ ರೂ. ೧ ಕೋಟಿ ೫೩ ಲಕ್ಷ ಸಾಲಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ಸಾಲದಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿರುತ್ತದೆ ಎಂದರು. ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೆಶಕರುಗಳಾದ ಟಿ.ಆರ್. ಗಿರೀಶ್, ಜೆ.ಸಿ. ಕೋಕೇಶ್, ಬಿ.ಕೆ. ಚಂದ್ರು, ಡಿ.ಈ. ಬಸಪ್ಪ, ಎನ್. ರಘು, ಸಿ.ಜೆ. ಗಿರೀಶ್, ಎಸ್.ಯು. ಆನಂದ್, ಎಸ್.ಎಂ. ನಟರಾಜ್, ಎ.ಆರ್. ರಕ್ಷಿತ್, ಕೆ.ಪಿ. ಪುಷ್ಪ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಹೆಚ್.ಟಿ. ನವೀನ ಕುಮಾರ್ ಉಪಸ್ಥಿತರಿದ್ದರು. ಸಿ.ಜೆ. ಗಿರೀಶ್ ಸ್ವಾಗತಿಸಿ, ಹೆಚ್.ಈ. ದೊಡ್ಡಯ್ಯ ವಂದಿಸಿದರು.