ಸುಂಟಿಕೊಪ್ಪ, ಡಿ. ೭: ಕಿಡಿಗೇಡಿಗಳು ಸರಕಾರಿ ಶಾಲೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಿದ ನೀರಿನ ಟ್ಯಾಂಕಿಗೆ ವಿಷ ಮಿಶ್ರಿತ ರಾಸಾಯನಿಕ ಪದಾರ್ಥಗಳನ್ನು ದುಷ್ಕರ್ಮಿಗಳು ಬೆರೆಸಿದ್ದಾರೆ ಎನ್ನಲಾಗಿದೆ. ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿ ಗಳಿಗೆ ನೀರಿನಲ್ಲಿ ಬರುತ್ತಿದ್ದ ದುರ್ನಾತ ತಡೆಯಲಾರದೆ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಮುಖ್ಯೋಪಾದ್ಯಾಯರು ಹಾಗೂ ಶಿಕ್ಷಕರು ಶೌಚಾಲಯಕ್ಕೆ ತೆರಳಿ ಪರಿಶೀಲಿಸಿದಾಗ ನೀರಿನ ಟ್ಯಾಂಕ್‌ನ ಮುಚ್ಚಳ ತೆರೆದು ಕೆಳಭಾಗದಲ್ಲಿ ಇರಿಸಿರುವುದು ಗೋಚರಿಸಿದೆ. ಮುಖ್ಯೋಪಾದ್ಯಾಯಿನಿ ಗೀತಾ ಗ್ರಾಮ ಪಂಚಾಯಿತಿಗೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಆರೋಗ್ಯ ಇಲಾಖೆಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದಾರೆ.

ಸಮಸ್ಯೆ ಗಂಭೀರತೆಯನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಪಿಡಿಓ ವೇಣುಗೋಪಾಲ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ಸದಸ್ಯರುಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು

(ಮೊದಲ ಪುಟದಿಂದ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಟ್ಯಾಂಕಿನ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ದುಷ್ಕರ್ಮಿಗಳು ನೀರಿನ ಟ್ಯಾಂಕಿಗೆ ವಿಷ ಹಾಕಿರುವುದು ಪರೀಕ್ಷೆ ಬಳಿಕ ದೃಢಪಟ್ಟಿದೆ.

ತಪ್ಪಿದ ಭಾರೀ ಅನಾಹುತ: ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿಯ ನೀರಿನ ಓವರೆಡ್ ಟ್ಯಾಂಕ್ ೨ನೇ ವಿಭಾಗಕ್ಕೆ ನೀರು ವಿತರಿಸುವ ಟ್ಯಾಂಕ್ ಇಲ್ಲೇ ಕಾರ್ಯಾಚರಿಸುತ್ತಿದೆ. ಶಾಲೆಯ ಅಕ್ಷರ ದಾಸೋಹವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಈ ನೀರಿನ ಟ್ಯಾಂಕ್ ಬಳಸಲಾಗುತ್ತದೆ. ಆಗೊಮ್ಮೆ ಈ ಟ್ಯಾಂಕ್ ನೀರು ಬಳಕೆಯಾದಲ್ಲಿ ಭಾರೀ ದೊಡ್ಡ ಅನಾಹುತವೇ ಆಗುತ್ತಿತ್ತು.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವ್ಯಸನಿಗಳ ಕಾಟ ಹೆಚ್ಚಾಗಿದೆ. ಶಾಲಾ ಮೈದಾನದಲ್ಲಿ, ನಾಡಕಚೇರಿಯ ಹಳೆಯ ಕಟ್ಟಡ ಹಿಂಭಾಗ, ಮಾರುಕಟ್ಟೆ ಆವರಣದಲ್ಲಿ ಗಾಂಜಾ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ. ಈ ತಾಣಗಳು ಗಾಂಜಾ ಪ್ರಿಯರಿಗೆ ಪ್ರಮುಖ ತಾಣವಾಗಿದೆ. ಈ ಹಿಂದೆ ಶಾಲಾ ಕೊಠಡಿಯಲ್ಲಿ ಇರಿಸಿದ್ದ ಮಕ್ಕಳ ಪುಸ್ತಕಗಳನ್ನು ರಾತ್ರಿವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದ್ವಂಸಗೊಳಿಸಿದ ಘಟನೆಯೂ ನಡೆದಿದೆ. ಈ ಘಟನೆಯ ಹಿಂದೆಯೂ ಮಾದಕ ವ್ಯಸನಿಗಳ ಕೈವಾಡ ಇರಬಹುದು ಎಂದು ಅನುಮಾನಿಸಲಾಗಿದೆ.