ಪೆರಾಜೆ, ಡಿ. ೭: ಚಿಗುರು ಯುವಕಮಂಡಲ ಪೆರಾಜೆ, ಜ್ಯೋತಿ ಪ್ರೌಢ ಶಾಲೆ ಪೆರಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರವು ಜ್ಯೋತಿ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಗುರು ಯುವಕಮಂಡಲದ ಅಧ್ಯಕ್ಷ ಅರುಣ ಮಜಿಕೋಡಿ ವಹಿಸಿದ್ದರು,

ಕಾರ್ಯಕ್ರಮವನ್ನು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಎನ್.ಎ. ಜ್ಞಾನೇಶ್ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಯುವಕರು ಮುಂದೆ ಬಂದು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲ ಕೊಯಿಂಗಾಜೆ ಮಾತನಾಡಿ, ಹಿಂದಿನ ಕಾಲದಲ್ಲಿ ಜನರು ಸ್ಥಳೀಯವಾಗಿ ಸಿಗುವ ದಿನಬಳಕೆಯ ವಸ್ತುಗಳನ್ನು ಉಪಯೋಗಿಸುವ ಮೂಲಕ ಆರೋಗ್ಯಕರ ಜೀವನ ನಡೆಸುತ್ತಿದ್ದರು.

ಆದರೆ ಇಂದು ಬಾಯಿ ಚಪಲಕ್ಕೆ ಬಲಿಯಾಗಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳನ್ನು ಬರಮಾಡಿ ಕೊಳ್ಳುತ್ತಿದ್ದೇವೆ.

ವೈದ್ಯರು ಸೂಚಿಸುವ ಆಹಾರ ಪದ್ಧತಿಯನ್ನು ಒಪ್ಪಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.

ವಿದ್ಯಾ ಸಂಘದ ಸಂಚಾಲಕ ಹರಿಶ್ಚಂದ್ರ ಮುಡ್ಕಜೆ ಮಾತನಾಡಿ, ಮುಂದಿನ ದಿನಗಳಲ್ಲಿ ಸಾಕು ಪ್ರಾಣಿಗಳಿಗೆ ಸಂಬAಧಿಸಿದ ರೋಗಗಳು ಬಾರದಂತೆ ತಡೆಗಟ್ಟುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ನಮ್ಮ ಸಂಘದ ಸಹಕಾರವಿದೆ ಎಂದು ತಿಳಿಸಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿ ಪೋಷಕರ ಸಂಘದ ಅಧ್ಯಕ್ಷೆ ವಿಧಕುಮಾರಿ ಬಂಗಾರಕೋಡಿ ಇದ್ದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಮಧುಮೇಹ ಮತ್ತು ರಕ್ತದೊತ್ತಡ ಬಾರದಂತೆ ತಡೆಯುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಶಿಬಿರವನ್ನು ಡಾ. ಪುನೀತ್ ರಾಘವೇಂದ್ರ ಕುಂಟುಕಾಡು ಮತ್ತು ಹರಿಚರಣ್ ಕುರುಂಜಿ ನಡೆಸಿಕೊಟ್ಟರು. ಸಂಪಾಜೆ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಘು. ಎಂ ಆರ್. ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ಶೈಲಜಾ, ಮತ್ತು ಜಯಶ್ರೀ ಸಹಕರಿಸಿದರು.

ವಿದ್ಯಾರ್ಥಿನಿ ಭಾವನ ತಂಡ ಪ್ರಾರ್ಥಿಸಿ, ಸಂಘದ ಸಾಂಸ್ಕೃತಿಕ ಅಧ್ಯಕ್ಷ ಮಿಥುನ್ ಮಜಿಕೋಡಿ ಸ್ವಾಗತಿಸಿ, ನಿಧಿ ಹೊದ್ದೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಚರಣ್ ರಾಜ್ ಕುಂಬಳಚೇರಿ ವಂದಿಸಿದರು,