ಮಡಿಕೇರಿ, ಡಿ. ೮ : ಪೊಲೀಸರು ಸಮಾಜ ವಿರೋಧಿ ಚಟುವಟಿಕೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದೆಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಪವಾರ್ ಮಧುಕರ್ ಹೇಳಿದರು.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ಕೊಡಗು ಸಿಪಾಯಿಗಳ ನಾಡು, ಈ ನಾಡು ಸಾಕಷ್ಟು ಮಂದಿಯನ್ನು ಸೇನೆಗೆ ಕೊಡುಗೆಯಾಗಿ ನೀಡಿದೆ, ಪೊಲೀಸ್ ಇಲಾಖೆಗೂ ಹಲವಷ್ಟು ಹಿರಿಯ ಅಧಿಕಾರಿಗಳನ್ನು ನೀಡಿದೆ, ಈ ನೆಲದ ಗೌರವವನ್ನು ಕಾಪಾಡಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರುವಂತೆ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.

ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ, ಈ ನಿಟ್ಟಿನಲ್ಲಿ ದೈಹಿಕ ಚಟುವಟಿಕೆಗಳಿಗಾಗಿ ದಿನ ನಿತ್ಯ ಒಂದು ಗಂಟೆ ಮೀಸಲಿಡಬೇಕು, ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ಕಾಳಜಿ ವಹಿಸುವಂತೆ ಸಲಹೆ ನೀಡಿದ ಅವರು ಕೊಡಗಿನಲ್ಲಿ ಭೂಕುಸಿತ, ಕೋವಿಡ್ ಸಂದರ್ಭದಲ್ಲೂ ಜಿಲ್ಲೆಯ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿರುವದು ಹೆಮ್ಮೆಯ ವಿಚಾರ, ಮುಂದಕ್ಕೂ ಇದೇ ರೀತಿಯ ಸೇವೆ

(ಮೊದಲ ಪುಟದಿಂದ) ಮುಂದುವರಿಯಲಿ ಎಂದು ಆಶಿಸಿದರು. ಪ್ರಸ್ತುತ ೧೧೨ ಸೇವೆ ಚಾಲ್ತಿಯಲ್ಲಿದ್ದು, ಯಾವದೇ ಕರೆ ಬಂದರೂ ಶೀಘ್ರ ಸ್ಪಂದಿಸಬೇಕು, ಈ ಸೇವೆಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕೆಂದು ಸಲಹೆಯಿತ್ತರು.

ಚಾಂಪಿಯನ್‌ಗಳು

ಕ್ರೀಡಾಕೂಟದಲ್ಲಿ ಅತ್ಯಧಿಕ ಅಂಕಗಳೊAದಿಗೆ ಮಡಿಕೇರಿ ಉಪ ವಿಭಾಗ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ವೈಯಕ್ತಿಕವಾಗಿ ಕುಮಾರ್ ಹಾಗೂ ಸುಬ್ರಮಣಿ ಚಾಂಪಿಯನ್ ಶಿಪ್ ಹಂಚಿಕೊAಡರೆ, ಮಹಿಳೆಯರ ವಿಭಾಗದಲ್ಲಿ ಭವ್ಯ ಚಾಂಪಿಯನ್ ಆದರು. ಉತ್ತಮ ಪಥಸಂಚಲನಕ್ಕಾಗಿ ಮಡಿಕೇರಿ ನಗರ ಠಾಣಾಧಿಕಾರಿ ಅಂತಿಮ ನೇತೃತ್ವದ ಮಹಿಳಾ ಪೊಲೀಸ್ ತಂಡ ಬಹುಮಾನ ಪಡೆದುಕೊಂಡಿತು. ವೇದಿಕೆಯಲ್ಲಿ ಐಜಿಪಿಯವರ ಪತ್ನಿ ಅನಿತಾ ಇದ್ದರು. ಇದೇ ಸಂದರ್ಭ ಅತಿ ಹೆಚ್ಚು ಅಂಕ ಗಳಿಸಿದ ಪೊಲೀಸರ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸ್ವಾಗತಿಸಿದರು. ಪೊಲೀಸರ ಕುಟುಂಬಸ್ಥರು, ನಿವೃತ್ತ ಅಧಿಕಾರಿಗಳು ಭಾಗವಹಿಸಿದ್ದರು.