ನಾಪೋಕ್ಲು, ಡಿ. ೭: ಕೊಡವ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೋವಿ ಪ್ರಮುಖ ಪಾತ್ರ ವಹಿಸುತ್ತಿದ್ದು ಕೋವಿಯ ಹಕ್ಕನ್ನು ಹೊಂದಲು ಕಾನೂನು ಬದ್ದ ಹೋರಾಟ ನಡೆಯುತ್ತಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ಜಿಲ್ಲಾಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಹಗ್ಗ-ಜಗ್ಗಾಟ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ಕೊಡವರು ಮತ್ತು ಇತರ ಕೊಡವ ಭಾಷಿಕರು, ಜಮ್ಮಾದವರು ಕೋವಿಯನ್ನು ಹೊಂದಿದ್ದು ಇದು ಪುರಾತನ ಕಾಲದಿಂದಲೂ ನಡೆದು ಬಂದಿದೆ. ಸಂವಿಧಾನಾತ್ಮಕ ಹಕ್ಕಾಗಿದೆ ಎಂದರು. ಈ ವಿಷಯದ ಬಗ್ಗೆ ಈಗಾಗಲೇ ರಾಜ್ಯ ಉಚ್ಚ ನ್ಯಾಯಲಯದಲ್ಲಿ ತೀರ್ಪು ಸಹ ಪ್ರಕಟವಾಗಿದ್ದು, ನಮಗೆ ಮಾನ್ಯತೆ ದೊರಕಿದಂತಾಗಿದೆ ಎಂದರು.
ಶತಮಾನಗಳಿಂದ ಜನಾಂಗ ಹೊಂದಿರುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯುವಜನಾಂಗ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸುವಂತೆ ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದರು.
ಇಂತಹ ಕಾರ್ಯಕ್ರಮದಿಂದ ಕೋವಿ ಬಳಕೆಯ ಬಗ್ಗೆ ಎಲ್ಲರಿಗೂ ಅರಿವು ಮೂಡುತ್ತದೆ ಎಂದರು. ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟೀರ ಹರೀಶ್, ಉಪಾಧ್ಯಕ್ಷೆ ಬಾಳೆಯಡ ದೀನಾ ಮÁಯಮ್ಮ, ಮುಖ್ಯಶಿಕ್ಷಕಿ ಕೋಟೇರ ಕಾಂತಿ ಸುರೇಶ್, ನೆಲಜಿ ವಿಎಸ್‌ಎಸ್‌ಎನ್ ಕಾರ್ಯನಿರ್ವಹಣಾಧಿಕಾರಿ ಬದ್ದಂಜೆಟ್ಟೀರ ಮುತ್ತಮ್ಮ ದೇವಯ್ಯ, ಕಾಫಿ ಬೆಳೆಗಾರ್ತಿ ಚೀಯಕಪೂವಂಡ ತಾರಾ ಮಾಚಯ್ಯ, ಅಪ್ಪುಮಣಿಯಂಡ ಸನ್ನು ಸೋಮಣ್ಣ ಪಾಲ್ಗೊಂಡಿದ್ದರು.
ಮಹಿಳಾ ಸಮಾಜದ ಅಧ್ಯಕ್ಷೆ ಮಣವಟ್ಟಿರ ಕಮಲ ಬೆಳ್ಯಪ್ಪ ಸ್ವಾಗತಿಸಿ, ಅಲ್ಲಾರಂಡ ಪ್ರೀತು ಪ್ರಾರ್ಥಿಸಿದರು. ಚಿಯಕಪೂವಂಡ ಅಪ್ಪಚ್ಚು ನಿರೂಪಿಸಿ, ಕಾರ್ಯದರ್ಶಿ ಅಪ್ಪುಮಣಿಯಂಡ ಡೈಸಿ ಸೋಮಣ್ಣ ವಂದಿಸಿದರು. ಈ ಸಂದರ್ಭ ಮಕ್ಕಳ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.
ವಿಜೇತರು: .೨೨ ವಿಭಾಗದ ಸ್ಪರ್ಧೆಯಲ್ಲಿ ಪುತ್ತರೀರ ನಂಜಪ್ಪ ಪ್ರಥಮ, ಬ್ರಿಜೇಶ್ ದ್ವಿತೀಯ ಹಾಗೂ ಮನೆಯಪಂಡ ನಾಣಯ್ಯ ತೃತೀಯ ಸ್ಥಾನ ಗಳಿಸಿದರು.
೧೨ ಬೋರ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಚೀಯಕಪೂವಂಡ ಸುಜ ಪ್ರಥಮ, ಚೊಕೀರ ಸಜನ್ ದ್ವಿತೀಯ, ಮನೆಯಪಂಡ ನಾಣಯ್ಯ ತೃತೀಯ ಸ್ಥಾನ ಗಳಿಸಿದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಅಪ್ಪುಮಣಿಯಂಡ ಕಿಶನ್ ತಂಡ ಪ್ರಥಮ ಸ್ಥಾನವನ್ನು, ಕೋಟೆರ ಕಿರಣ್ ದ್ವಿತೀಯ ಸ್ಥಾನವನ್ನು ಗಳಿಸಿತು.
ಮಹಿಳೆಯರ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಕೋಕೇರಿ ಪೊನ್ನಚಂಡ ಮಂಜುಳತAಡ ಪ್ರಥಮ, ಅಲ್ಲಾರಂಡ ನಿಖಿತ ತಂಡ ದ್ವಿತೀಯ ಸ್ಥಾನ.
.೨೨ ವಿಭಾಗದ ಟ್ರೋಫಿಯನ್ನು ಅಪ್ಪುಮಣಿಯಂಡ ಸನ್ನು ಸೋಮಣ್ಣ, ೧೨ ಬೋರ್ ವಿಭಾಗದ ಟ್ರೋಫಿಯನ್ನು ಮುಕ್ಕಾಟಿರ ಚಿಣ್ಣಪ್ಪ, ಪುರುಷರ ಹಗ್ಗಜಗ್ಗಾಟದ ಟ್ರೋಫಿಯನ್ನು ಅಂಬಲ ಮಹಿಳಾ ಸಮಾಜ ಹಾಗೂ ಮಹಿಳೆಯರ ಹಗ್ಗಜಗ್ಗಾಟದ ಟ್ರೋಫಿಯನ್ನು ಅಲ್ಲಾರಂಡ ಭಾರತಿ ಧನುಕುಮಾರ್ ಪ್ರಾಯೋಜಿಸಿದ್ದರು.