ಸೋಮವಾರಪೇಟೆ, ಡಿ. ೭: ಬಳಗುಂದ ಗ್ರಾಮದಲ್ಲಿ ಕೆಲವರು ಸರ್ಕಾರಿ ಕಡಂಗ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಿಸಿದ್ದು, ಇದರಿಂದಾಗಿ ತೋಟ ಹಾಗೂ ಮನೆಗಳಿಗೆ ತೆರಳಲು ಸಮಸ್ಯೆಯಾಗಿದೆ. ತಕ್ಷಣ ಇದನ್ನು ತೆರವುಗೊಳಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಬಳಗುಂದ ಗ್ರಾಮ ನಿವಾಸಿ ಲೋಕೇಶ್ (ರವಿ) ಸೇರಿದಂತೆ ಇತರರ ತೋಟಕ್ಕೆ ತೆರಳುವ ರಸ್ತೆಗೆ ಕಳೆದ ೨೦೧೯ ರಂದು ಬೇಲಿ ಹಾಕಿ ತಡೆಯೊಡ್ಡಲಾಗಿದ್ದು, ಈ ಬಗ್ಗೆ ತಾಲೂಕು ಕಚೇರಿಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಈ ಹಿನ್ನೆಲೆ ಇಂದು ಲೋಕೇಶ್ ಅವರು ತಮ್ಮ ಕುಟುಂಬದೊAದಿಗೆ ತಾಲೂಕು ಕಚೇರಿ ಎದುರು ಧರಣಿ ನಡೆಸಲು ಮುಂದಾಗಿದ್ದು, ಇವರಿಗೆ ರೈತ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿ, ತಹಶೀಲ್ದಾರ್‌ರೊಂದಿಗೆ ಮಾತುಕತೆ ನಡೆಸಿದರು.
ಬಳಗುಂದ ಗ್ರಾಮದಲ್ಲಿ ಕೃಷಿಕರ ತೋಟಕ್ಕೆ ತೆರಳಲು ಅನಾದಿ ಕಾಲದಿಂದಲೂ ರಸ್ತೆಯಿದ್ದು, ಕಂದಾಯ ಇಲಾಖೆಯ ದಾಖಲೆಯಲ್ಲೂ ಕಡಂಗ ರಸ್ತೆ ಎಂದು ಉಲ್ಲೇಖವಿದೆ. ಆದರೆ ಕಳೆದ ೨೦೧೯ ರಂದು ತಾರಾ ಮಂಜು ಎಂಬವರಿಗೆ ಸೇರಿದ ಜಾಗದೊಳಗೆ ಹಾದುಹೋಗಿರುವ ಕಡಂಗ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದು, ನಮಗೆ ನಡೆದಾಡಲೂ ಅಸಾಧ್ಯವಾಗಿದೆ. ಇದರಿಂದಾಗಿ ಕಳೆದ ೩ ವರ್ಷದಿಂದ ತೋಟದಲ್ಲಿ ಯಾವುದೇ ಕೃಷಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಕಾಫಿಯನ್ನು ಕೊಯ್ಲು ಮಾಡಲೂ ಆಗಿಲ್ಲ ಎಂದು ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಿರ್ದೇಶನ ಬಂದಿದ್ದರೂ ಸ್ಥಳೀಯ ಸರ್ವೆ ಇಲಾಖೆಯ ಸಿಬ್ಬಂದಿಗಳು ಸರ್ವೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಲೋಕೇಶ್ ಆರೋಪಿಸಿದರು.
ಈ ಸಂದರ್ಭ ಸ್ಥಳಕ್ಕೆ ಸರ್ವೆ ಇಲಾಖೆಯ ಸೂಪರ್‌ವೈಸರ್ ಬ್ರಹ್ಮೇಶ್ ಅವರನ್ನು ಕರೆಯಿಸಿದ ತಹಶೀಲ್ದಾರ್ ಆರ್. ಗೋವಿಂದರಾಜು ಅವರು, ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸರ್ವೆ ಮಾಡಬೇಕು. ಕಡಂಗ ಜಾಗ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ದಾಖಲೆಯನ್ವಯ ಕಡಂಗ ಜಾಗ ಒತ್ತುವರಿ ಮಾಡಿಕೊಂಡಿರುವ ಎಲ್ಲರಿಗೂ ನೋಟೀಸ್ ನೀಡಿ, ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮುಂದಿನ ೧೫ ದಿನಗಳ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಸಂಚಾಲಕ ಎಸ್.ಬಿ. ರಾಜಪ್ಪ, ಉಪಾಧ್ಯಕ್ಷ ಎ.ಆರ್. ಕುಶಾಲಪ್ಪ, ಗೌರವ ಸಲಹೆಗಾರ ಬಸವರಾಜು, ರಾಜು ಹಾನಗಲ್ಲು ಸೇರಿದಂತೆ ಲೋಕೇಶ್ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.