ತನಗೆ ಗೌರವಯುತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಆಕ್ಷೇಪಿಸಿದರು. ನೂತನ ಅಧ್ಯಕ್ಷರು ಹಿಂಬಾಗಿಲು ಅಥವಾ ಮುಂಬಾಗಿಲ ಮೂಲಕ ಅಧಿಕಾರ ಪಡೆದರೋ ತಿಳಿದಿಲ್ಲ ಎಂಬ ಮಾತು ವಿರೋಧಕ್ಕೆ ಕಾರಣವಾಯಿತು.
ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ದೂರವಾಣಿ ಅಥವಾ ಖುದ್ದು ಭೇಟಿ ಮಾಡಿ ಆಹ್ವಾನ ನೀಡಬೇಕಾಗಿತ್ತು. ಕಾರ್ಯಕ್ರಮದ ಒಂದು ದಿನ ಮುನ್ನ ರಿಜಿಸ್ಟರ್ ಪೋಸ್ಟ್ ಮಾಡಿರುವುದು ಸರಿಯಲ್ಲ. ರಿಜಿಸ್ಟರ್ ಪೋಸ್ಟ್ ನಮ್ಮ ಸಂಸ್ಕೃತಿಯಲ್ಲ.
(ಮೊದಲ ಪುಟದಿಂದ) ಚುನಾವಣೆ ಸಂದರ್ಭದಲ್ಲಿ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುವ ಕೆಲಸವಾಗಿದೆ. ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ ಎಂದು ಪತ್ರಿಕಾಗೋಷ್ಠಿ ಮಾಡಿ ಮತದಾರರ ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಲೋಕೇಶ್ ಸಾಗರ್ ಮಾತಿನ ಮಧ್ಯೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ೬ ಕಡೆಗಳಲ್ಲಿ ಅಧ್ಯಕ್ಷರ ಮರು ಆಯ್ಕೆಯಾಗಿದೆ. ಸುಳ್ಳು ಹೇಳಿ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಲೋಕೇಶ್ ಸಾಗರ್ ದೂರಿದರು.
ಈ ಮಧ್ಯೆ ಸಭೆಯಲ್ಲಿದ್ದ ಸದಸ್ಯರೊಬ್ಬರು ಲೋಕೇಶ್ ಸಾಗರ್ ಮಾತನ್ನು ಆಕ್ಷೇಪಿಸಿದರು. ಬಳಿಕ ಸಭಿಕರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು. ನಿರೂಪಕ ಮುನೀರ್ ಅಹ್ಮದ್ ಮೈಕ್ ಕಸಿದುಕೊಂಡು ಇದು ಸಭೆಗೆ ಶೋಭೆಯಲ್ಲ ಎಂದು ಹೇಳುವಾಗ ಲೋಕೇಶ್ ಸಾಗರ್ ಮೈಕ್ ಬಿಡ್ರಿ ಎಂದು ಖಾರವಾಗಿ ಹೇಳಿದರು. ಇದಕ್ಕೆ ಮುನೀರ್ ಅಸಮಾಧಾನ ವ್ಯಕ್ತಪಡಿಸಿ ಲೋಕೇಶ್ ವಿರುದ್ಧವೇ ಕಿಡಿಕಾರಿದರು.
ಬಳಿಕ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಲೋಕೇಶ್ ಸಾಗರ್ ಸಭೆಯಿಂದ ಹೊರನಡೆದರು.