ವೀರಾಜಪೇಟೆ, ಡಿ. ೬: ವೀರಾಜಪೇಟೆಯ ಸಾಹಿತ್ಯ ಸಂವರ್ಧಕ ಪರಿಷತ್ ಮತ್ತು ಮನೆ ಮನೆ ಕವಿಗೋಷ್ಠಿ ಪರಿಷತ್ತಿನ ಆಶ್ರಯದಲ್ಲಿ ಅರಮೇರಿಯ ಶ್ರೀ ಕಳಂಚೇರಿ ಮಠದ ಎಸ್.ಎಂ.ಎಸ್.ಸಭಾAಗಣದಲ್ಲಿ ನಡೆದ ಸಮಾರಂಭದಲ್ಲಿ ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಬೊಮ್ಮ ಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಉದ್ಘಾಟನೆ ನಡೆಯಿತು. ಪಿ.ಎಸ್. ವೈಲೇಶ್ ರಚಿಸಿದ “ಮನದ ಇನಿದನಿ” ಕೃತಿಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆÀಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಜಿಲ್ಲೆಯ ಸಾಹಿತ್ಯ ಪ್ರತಿಭೆಗಳ ಪರಿಚಯಮಾಲೆಯ ಸಂಗ್ರಹ “ಕೊಡಗಿನ ಸಾಹಿತ್ಯ ತಪಸ್ವಿಗಳು” ಕೃತಿಯನ್ನು ಹಿರಿಯ ಜಾನಪದ ಸಾಹಿತಿ ಮೋಹನ್ ಪಾಳೇಗಾರ್ ಹಾಗೂ ಸಾಹಿತಿ ಗಿರೀಶ್ ಕಿಗ್ಗಾಲು ರಚಿಸಿದ ಕಾದಂಬರಿ “ಇರುವುದೆಲ್ಲವ ಬಿಟ್ಟು” ಕೃತಿಯನ್ನು ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಬಿಡುಗಡೆಗೊಳಿಸಿದರು.
ಮೋಹನ್ ಪಾಳೇಗಾರ್ ಮಾತನಾಡಿ, ಸಮಾಜವನ್ನು ಮೌಲ್ಯದೆಡೆಗೆ ಕೊಂಡೊಯ್ಯಲು ಸಾಹಿತ್ಯಕ್ಕೆ ಸಾಧ್ಯವಿದೆ. ಯುವಪೀಳಿಗೆಯಲ್ಲಿ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆದಲ್ಲಿ ಮಾತ್ರ ಸಾಹಿತ್ಯ ಸಂಸ್ಕೃತಿ ಉಳಿಯಲು ಸಾಧ್ಯ. ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಬೊಮ್ಮಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿದ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಸಾಹಿತ್ಯಗಳು ಸಮಾಜದ ಬೆಳಕುಗಳು. ಬೆಳಕಿಲ್ಲದ ಪ್ರಪಂಚವನ್ನು ಊಹಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಸಾಹಿತ್ಯಗಳಿಲ್ಲದ ಸಮಾಜ ನಿರರ್ಥಕ ಎಂದರು.
ಹರೀಶ್ ಕಿಗ್ಗಾಲು ಸ್ವಾಗತಿಸಿದರು. ಚಿತ್ರ ಕಲಾವಿದ ಸತೀಶ್ ಹಾಗೂ ಮೋಹನ್ ಗಾಯನದೊಂದಿಗೆ ಚಿತ್ರ ರಚಿಸಿದರು. ಹಿರಿಯ ಸಾಹಿತಿಗಳಾದ ಕಸ್ತೂರಿ ಗೋವಿಂದಮ್ಮಯ್ಯ, ಮೊಣ್ಣಂಡ ಶೋಭಾ ಸುಬ್ಬಯ್ಯ ವೇದಿಕೆಯಲ್ಲಿದ್ದರು.