ಮಡಿಕೇರಿ, ಡಿ. ೬: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾದ ಪರಿಣಾಮ ಯುವಕ ಮೃತಪಟ್ಟ ಘಟನೆ ಚಿಕ್ಲಿಹೊಳೆ ಸಮೀಪ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಅಂಬಲಾರೆ ಗ್ರಾಮದ ಪವನ್ ಕುಮಾರ್ ಮೃತ ದುರ್ದೈವಿ.

ಬೆಟ್ಟಗೇರಿಗೆ ಗೃಹ ಪ್ರವೇಶಕ್ಕೆಂದು ಪವನ್ ಕುಮಾರ್ ತನ್ನ ೫ ಮಂದಿ ಸ್ನೇಹಿತರೊಂದಿಗೆ ಮಾರುತಿ ೮೦೦ ಕಾರ್‌ನಲ್ಲಿ ಬಂದು ಬಳಿಕ ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಿ ರಂಗಸಮುದ್ರ ರಸ್ತೆ ಮೂಲಕ ನಂಜರಾಯಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಪರಿಣಾಮ ಗಂಭೀರ ಗಾಯಗೊಂಡ ಪವನ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ.

ಇನ್ನೋರ್ವ ಯುವಕ ಗಂಭೀರ ಗಾಯಗೊಂಡಿದ್ದಾನೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಉಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ: ಟಿ.ಜಿ. ಸತೀಶ್