ಸೋಮವಾರಪೇಟೆ, ಡಿ. ೫: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ೪ ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿ ರೋಗಿಗಳಿಗೆ ಸೇವೆ ಒದಗಿಸುತ್ತಿದ್ದ ಡಯಾಲಿಸಿಸ್ ಘಟಕ ಸದ್ಯಕ್ಕೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಆಡಳಿತಗಾರರು ತುರ್ತು ಗಮನ ಹರಿಸಬೇಕಿದೆ.
ಡಯಾಲಿಸಿಸ್ ಘಟಕದಲ್ಲಿ ಪ್ರಸ್ತುತ ೨ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದೂ ಸಹ ಆಗಾಗ್ಗೆ ಕೈಕೊಡುತ್ತಿರುವುದರಿಂದ ರೋಗಿಗಳಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.
ಈಗ ಇರುವ ೨ ಡಯಾಲಿಸಿಸ್ ಘಟಕದಲ್ಲಿ ಆಗಾಗ್ಗೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ರೋಗಿಗಳು ಜೀವಭಯದಿಂದಲೇ ಚಿಕಿತ್ಸೆಗೆ ಒಳಪಡುವಂತಾಗಿದೆ. ಘಟಕದಲ್ಲಿ ನಿರ್ವಹಣೆಯ ಕೊರತೆಯೂ ಕಂಡುಬರುತ್ತಿದ್ದು, ಇದರೊಂದಿಗೆ ತಾಂತ್ರಿಕ ದೋಷಗಳು ಎದುರಾಗುತ್ತಿರುವ ಹಿನ್ನೆಲೆ ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣವಾಗುತ್ತಲೇ ಇದೆ.
ಕಳೆದ ೩ ತಿಂಗಳವರೆಗೂ ಉತ್ತಮವಾಗಿ ನಡೆಯುತ್ತಿದ್ದ ಡಯಾಲಿಸಿಸ್ ಘಟಕ, ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಘಟಕದ ಸಮಸ್ಯೆಗಳತ್ತ ಗಮನಹರಿಸಿ, ಎರಡು ಯಂತ್ರಗಳನ್ನು ದುರಸ್ತಿಗೊಳಿಸುವಲ್ಲಿ ಶ್ರಮವಹಿಸಿದ್ದರು.
(ಮೊದಲ ಪುಟದಿಂದ) ಇದೀಗ ಆ ಯಂತ್ರಗಳಲ್ಲೂ ತಾಂತ್ರಿಕ ದೋಷ ಕಂಡುಬರುತ್ತಿದ್ದು, ಹೊಸ ಘಟಕಗಳ ಅಳವಡಿಕೆಗೆ ಕ್ರಮವಹಿಸಲೇಬೇಕಿದೆ.
ಸೋಮವಾರಪೇಟೆಯ ಡಯಾಲಿಸಿಸ್ ಘಟಕದಲ್ಲಿ ವಾರದಲ್ಲಿ ೨೨ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿತ್ತು. ಇದೀಗ ತಾಂತ್ರಿಕ ಸಮಸ್ಯೆಗೆ ಒಳಗಾಗಿರುವುದರಿಂದ ರೋಗಿಗಳ ಸಂಖ್ಯೆ ೬ಕ್ಕೆ ಇಳಿಕೆಯಾಗಿದ್ದು, ಉಳಿದವರು ಜೀವ ಉಳಿಸಿಕೊಳ್ಳಲು ಮಡಿಕೇರಿ, ಹಾಸನ, ಮೈಸೂರಿಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ನಡೆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ. ಇದರಿಂದಾಗಿ ಬಡ ರೋಗಿಗಳು ಹೆಚ್ಚಿನ ಸಮಸ್ಯೆಗೆ ಸಿಲುಕುವಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವಾರದಲ್ಲಿ ೨ ಬಾರಿ ಡಯಾಲಿಸಿಸ್‌ಗೆ ಒಳಪಡುವ ರೋಗಿಗಳು ೪೮೦೦ ರೂಪಾಯಿ ನೀಡಬೇಕಿದೆ. ವಾರಕ್ಕೊಮ್ಮೆ ಇಷ್ಟು ದೊಡ್ಡಮೊತ್ತವನ್ನು ಭರಿಸಲು ಬಡ ರೋಗಿಗಳಿಗೆ ಸಾಧ್ಯವೇ? ಎಂದು ಐಗೂರಿನ ಶಶಿ ಅವರು ಪ್ರಶ್ನಿಸಿದ್ದಾರೆ.
ಪ್ರತಿ ದಿನ ಒಂದು ಪಾಳಿಯಲ್ಲಿ ಮೂವರು ರೋಗಿಗಳಂತೆ ದಿನಕ್ಕೆ ೩ ಪಾಳಿಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ರೋಗಿಗಳಿಗೆ ವರದಾನವಾಗಿತ್ತು. ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೇರವಾಗಿ ಕರ್ನಾಟಕ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಕಳೆದ ೪ ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯವರು ಡಯಾಲಿಸಿಸ್ ಘಟಕವನ್ನು ವಾರ್ಷಿಕ ನಿರ್ವಹಣೆಗೆ ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು, ಯಂತ್ರೋಪಕರಣ ಸೇರಿದಂತೆ ಇತರ ಸವಲತ್ತುಗಳಿಗೆ ಸರ್ಕಾರವೇ ಅನುದಾನ ಕಲ್ಪಿಸಿದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಟ್ಟಡ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನಷ್ಟೇ ಒದಗಿಸಲಾಗಿದ್ದು, ಉಳಿದಂತೆ ಎಲ್ಲಾ ಸೌಕರ್ಯಗಳನ್ನು ಖಾಸಗಿ ಸಂಸ್ಥೆಯವರೇ ಅಳವಡಿಸಿದ್ದಾರೆ. ಇತ್ತೀಚೆಗೆ ಈ ಸಂಸ್ಥೆ ಪಡೆದಿದ್ದ ಗುತ್ತಿಗೆ ಅವಧಿಯೂ ಮುಗಿದಿದ್ದು, ಸಂಸ್ಥೆಯಿAದ ಯಾವುದೇ ನಿರ್ವಹಣೆ ಇಲ್ಲವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಹಾಗೂ ಒಂದಿಬ್ಬರು ಸಿಬ್ಬಂದಿಗಳಿದ್ದಾರೆ.
ಈ ಘಟಕದ ಆರ್.ಓ. ಪ್ಲಾಂಟ್‌ನಲ್ಲಿ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಡಯಾಲಿಸಿಸ್ ಘಟಕದ ದುರಸ್ತಿಗೆ ನುರಿತ ತಂತ್ರಜ್ಞರು ಲಭ್ಯವಾಗದ ಹಿನ್ನೆಲೆ ಸಮಸ್ಯೆ ಇಂದಿಗೂ ಜೀವಂತವಾಗಿದೆ.
ಸೋಮವಾರಪೇಟೆಯಲ್ಲಿ ೩ ಘಟಕಗಳಿದ್ದು, ಸದ್ಯಕ್ಕೆ ೨ ಘಟಕಗಳು ಮಾತ್ರ ಸಮಸ್ಯೆಗಳ ನಡುವೆಯೂ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದು ಘಟಕ ಬಳಕೆಗೆ ಯೋಗ್ಯವಾಗಿಲ್ಲ. ಒಂದು ಘಟಕದಲ್ಲಿ ೨ ಶಿಫ್ಟ್ನಂತೆ ಒಂದು ದಿನಕ್ಕೆ ೪ ಮಂದಿಗೆ ಮಾತ್ರ ಡಯಾಲಿಸಿಸ್ ಮಾಡಬೇಕಿದ್ದರೂ, ತೀವ್ರ ಒತ್ತಡ ಇರುವ ಹಿನ್ನೆಲೆ ೩ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಘಟಕದ ಬಗ್ಗೆ ಈಗಾಗಲೇ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರ ಗಮನಕ್ಕೆ ತರಲಾಗಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ. ಹೊಸದಾಗಿ ೪ ಯಂತ್ರಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದ್ದು, ಯಂತ್ರಗಳು ಇನ್ನಷ್ಟೇ ಆಗಮಿಸಬೇಕಿದೆ. ೪ ಯಂತ್ರಗಳು ಆಗಮಿಸಿದರೆ ಈಗಿರುವ ೨ ಯಂತ್ರಗಳನ್ನು ಬದಲಿ ವ್ಯವಸ್ಥೆಗೆ ಬಳಸಿಕೊಳ್ಳಲಾಗುವುದು. ಹಳೆಯ ರೋಗಿಗಳೊಂದಿಗೆ ಹೊಸದಾಗಿಯೂ ರೋಗಿಗಳು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ‘ಸೀನಿಯಾರಿಟಿ’ ಆಧಾರದಲ್ಲಿ ಸೇವೆ ಒದಗಿಸಲು ಕ್ರಮವಹಿಸಲಾಗುವುದು. ಹೊಸ ಯಂತ್ರಗಳು ಬಂದರೆ ಸಮಸ್ಯೆ ಬಗೆಹರಿಯಲಿದೆ ಎಂದು ಆಸ್ಪತ್ರೆಯ ವೈದ್ಯರಾದ ಸತೀಶ್‌ಕುಮಾರ್ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿಯಾಗಿ ೪ ಡಯಾಲಿಸಿಸ್ ಯಂತ್ರಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶಾಸಕರ ಅನುದಾನದಿಂದ ಹಣ ಬಿಡುಗಡೆ ಮಾಡಲಾಗುವುದು. ಸದ್ಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಅನುದಾನ ಬಿಡುಗಡೆಯಾಗಿಲ್ಲ. ಸದ್ಯದಲ್ಲಿಯೇ ಹೊಸ ಯಂತ್ರಗಳನ್ನು ಅಳವಡಿಸಿ, ರೋಗಿಗಳ ಸೇವೆಗೆ ಒದಗಿಸಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ. -ವಿಜಯ್ ಹಾನಗಲ್