ಮಡಿಕೇರಿ, ಡಿ. ೬ : ಕೊರೊನಾ ನಿಯಮಗಳ ಪ್ರಕಾರ ಶಾಲೆಗೆ ಹೋಗುವುದು ಕಡ್ಡಾಯವಲ್ಲ ಎಂಬ ನಿಯಮವನ್ನು ದುರುಪಯೋಗಪಡಿಸಿಕೊಂಡ ಒಂದಷ್ಟು ಪುಂಡ ಮಕ್ಕಳು ಕಳ್ಳತನಕ್ಕಿಳಿದು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪ್ರಕರಣ, ಪೊಲೀಸರು ಮಾತ್ರವಲ್ಲ, ಶಿಕ್ಷಕರು ಮತ್ತು ಪೋಷಕ ವರ್ಗವನ್ನು ಕೂಡ ಚಿಂತೆಗೀಡು ಮಾಡಿದೆ. ಘಟನೆಯ ವಿವರ ಇಂತಿದೆ.

ಮಡಿಕೇರಿ ನಗರದ ಕೆಲವು ಬಡಾವಣೆಗಳಲ್ಲಿ ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಹಲವು ಸೈಕಲ್‌ಗಳು ಕಳ್ಳತನವಾಗಿದ್ದವು. ಕೆಲವು ಸೈಕಲ್ ಮಾಲೀಕರು ಹೋದರೆ ಹೋಗಲಿ ಅಂತ ನಿರ್ಲಕ್ಷö್ಯಮಾಡಿದ್ದರೆ, ಮತ್ತೆ ಕೆಲವರು ಹಾಗೆ ಬಾಯಿಮಾತಿನಲ್ಲೇ ಪರಿಚಿತ ಪೊಲೀಸರೊಂದಿಗೆ ಸೈಕಲ್ ಕಳ್ಳತನದ ಬಗ್ಗೆ ದೂರಿಕೊಂಡಿದ್ದರು. ಸೈಕಲ್ ಕಳ್ಳತನ ಹೆಚ್ಚಾದಾಗ ಕುತೂಹಲಗೊಂಡ ಮಡಿಕೇರಿ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು, ಘಟನೆ ನಡೆದ ಅಕ್ಕಪಕ್ಕದ ಮನೆಗಳ ಸಿಸಿಟಿವಿ ಚೆಕ್ ಮಾಡಿದ್ದಾರೆ. ಈ ಸಂದರ್ಭ ಒಂದೈದು ಹುಡುಗರ ತಂಡ ಸಂಶಯಾಸ್ಪದವಾಗಿ ಬಡಾವಣೆಯ ರಸ್ತೆಗಳಲ್ಲಿ ಓಡಾಡಿರುವುದು ಕಂಡು ಬಂದಿದೆ.

ಯಾರು ಈ ಹುಡುಗರು, ಎಲ್ಲಿಂದ ಬರುತ್ತಾರೆ ಎಂದು ಪೊಲೀಸರು ಸ್ವಲ್ಪ ವಿಚಾರಣೆ ನಡೆಸಿದಾಗ ಇವರೆಲ್ಲರೂ ನಗರದ ನಿರ್ಧಿಷ್ಟ ಬಡಾವಣೆಯೊಂದರ ವಾಸಿಗಳು ಎಂಬ ಅಂಶ ಕಂಡು ಬಂದಿದೆ. ಸಾಕ್ಷö್ಯ ಇಲ್ಲದೆ ಒಮ್ಮೆಗೆ ಈ ಹುಡುಗರನ್ನ ಹಿಡಿಯುವುದು ಹೇಗೆ ಅಂತ ಯೋಚಿಸಿದ ಪೊಲೀಸರು, ಅವರ ಮೇಲೆ ನಿಗಾ ಇಟ್ಟಿದ್ದಾರೆ. ಅವರು ಓದುತ್ತಿದ್ದ ಶಾಲೆಯ ಸುತ್ತಮುತ್ತಲ ನಿವಾಸಿಗಳಲ್ಲಿ ಈ ಹುಡುಗರ ಚಲನವಲನದ ಬಗ್ಗೆ ಗಮನವಿಟ್ಟು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಇದಾಗಿ ಕೆಲವೇ ದಿನಗಳಲ್ಲಿ, ಮಾಹಿತಿದಾರರಿಂದ ಪೊಲೀಸರಿಗೆ ಫೋನ್ ಕರೆಯೊಂದು ಬರುತ್ತದೆ. ಈ ಹುಡುಗರ ತಂಡ ಮ್ಯಾನ್ಸ್ಕಾಂಪೌAಡ್ ಪ್ರವೇಶ ದ್ವಾರದ ಎಡಬದಿಯಲ್ಲಿ ಪಾಳು ಬಿದ್ದಿರುವ ಕಟ್ಟಡದ ಒಳಗೆ ನುಸುಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಂಬೇಡ್ಕರ್ ಭವನದ ಸಮೀಪದಲ್ಲೇ ಈ ಕಟ್ಟಡವಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಕಟ್ಟಡದ ಒಳಗೆ ಹೇಗೆ ಪ್ರವೇಶಿಸುವುದು ಅಂತಾನೇ ಗೊತ್ತಾಗಿಲ್ಲ. ಏಕೆಂದರೆ ಕಟ್ಟಡದ ಮುಖ್ಯದ್ವಾರದ ಶಟರ್ ತುಕ್ಕು ಹಿಡಿದಿರುವುದರಿಂದ ಅದು ತೆರೆದುಕೊಳ್ಳುತ್ತಿರಲಿಲ್ಲ.

ಹಾಗಾಗಿ ಅದು ಒನಕೆ ಓಬವ್ವನ ಕಿಂಡಿಯAತೆ ಸ್ವಲ್ಪವೇ ತೆರೆದುಕೊಂಡಿತ್ತು. ಹೇಗೋ ಸಾಹಸಪಟ್ಟು ಶಟರ್

(ಮೊದಲ ಪುಟದಿಂದ) ಕೆಳಗೆ ನುಸುಳಿ ಒಳತೆರಳಿ ನೋಡಿದಾಗ ಅಚ್ಚರಿಯ ಸನ್ನಿವೇಶ ಕಂಡುಬAದಿದೆ. ಕಟ್ಟಡದ ಒಳಕೋಣೆಯಲ್ಲಿ ರಾಶಿ ರಾಶಿ ಹಳೆಯ ಪಠ್ಯ ಪುಸ್ತಕಗಳು. ಈ ಪುಸ್ತಕಗಳನ್ನ ಮಕ್ಕಳು ಚೀಲಕ್ಕೆ ತುಂಬಿಸುತ್ತಿದ್ದ ದೃಶ್ಯ ಕಂಡುಬAದಿದೆ. ಜೊತೆಗೆ ಒಬ್ಬನ ಬಳಿ ಸಿಗರೇಟು ಪ್ಯಾಕೇಟು. ಮತ್ತೊಬ್ಬನ ಬ್ಯಾಗಲ್ಲಿ ಉದ್ದನೆಯ ಕತ್ತಿ. ಸಿಗರೇಟು ಎಳೀತೀರಾ ಅಂತ ಗದರಿಸಿ ಕೇಳಿದಾಗ ಮಕ್ಕಳು ಮಾತ್ರ, ಇಲ್ಲಾ ಸಾರ್, ಅದು ನಮ್ಮಪ್ಪನ ಪ್ಯಾಂಟು ಹಾಕ್ಕೊಂಡು ಬಂದೆ ಅವರ ಸಿಗರೇಟು ಅಂತೆಲ್ಲಾ ಕತೆ ಕಟ್ಟಿದ್ದಾರೆ. ಕತ್ತಿ ಯಾಕೆ ಅಂತ ಕೇಳಿದರೆ, ಕಬ್ಬು ಕಡಿಯಲು ಅಂತ ಹೇಳಿದ್ದಾರೆ. ಇಲ್ಲಿ ಏನ್ರೋ ಮಾಡ್ತಾ ಇದ್ದೀರಾ ಅಂತ ಪೊಲೀಸರು ಗದರಿಸಿ ಕೇಳಿದಾಗ ಅವರ ಹಲವು ಕಳ್ಳತನ ಪ್ರಕರಣಗಳು ಬಯಲಾಗಿವೆ. ಕಟ್ಟಡದ ಒಳಗೆ ಅವಧಿ ಮೀರಿದ ಸಾವಿರಾರು ಪಠ್ಯ ಪುಸ್ತಕಗಳನ್ನು ಸುರಿಯಲಾಗಿದೆ. ಈ ಪುಸ್ತಕಗಳನ್ನು ಚೀಲಕ್ಕೆ ತುಂಬಿಸಿ ಆಟೋ ರಿಕ್ಷಾದಲ್ಲಿ ಕೊಂಡೊಯ್ದು ಗುಜರಿ ಅಂಗಡಿಗೆ ಮಾರುತ್ತಿದ್ದರಂತೆ. ಅದರಲ್ಲಿ ಬಂದ ಹಣದಲ್ಲಿ ಖುಷ್ಕ ಬಿರಿಯಾನಿ ತಿನ್ನುತ್ತಿದ್ದರಂತೆ. ಇನ್ನು ಸೈಕಲ್ ಕಳ್ಳತನದ ಬಗ್ಗೆ ಕೇಳಿದಾಗ ಅದನ್ನೂ ಒಪ್ಪಿಕೊಂಡಿದ್ದಾರೆ. ಇದುವರೆಗೆ ೮ ಸೈಕಲ್ ಕಳ್ಳತನ ಮಾಡಿದ್ದಾರಂತೆ. ಅವುಗಳಲ್ಲಿ ಕೆಲವನ್ನು ಮಾರಿದ್ದಾರೆ. ಮತ್ತೆ ಕೆಲವು ಸೈಕಲ್ ಮಾಲೀಕರಿಗೆ ಇವರ ಕಳ್ಳತನ ಅರಿವಾಗಿ, ಬಂದು ಬೈಯ್ದು ಕೊಂಡೊಯ್ದಿದ್ದಾರAತೆ. ಕೊನೆಗೆ ಈ ಮಕ್ಕಳು ಓದುತ್ತಿದ್ದ ಶಾಲೆಯ ಶಿಕ್ಷಕರನ್ನು ಅಲ್ಲಿಗೆ ಕರೆಸಲಾಯಿತು.

ಈ ಮಕ್ಕಳು ಹಿಂದೆಯೂ ಹಲವು ಸಣ್ಣಪುಟ್ಟ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದ ವಿಷಯ ಬಯಲಾಯಿತು. ಎಲ್ಲರೂ ೮ ರಿಂದ ೧೨ ವರ್ಷದೊಳಗಿನವರಾಗಿದ್ದು, ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ, ತಂದೆ ತಾಯಿ ಕೆಲಸಕ್ಕೆ ಹೋದ ಬಳಿಕ ಶಾಲೆಗೆ ತೆರಳುವುದಾಗಿ ಬರುತ್ತಾರೆ. ಆದರೆ ಶಾಲೆಗೆ ತೆರಳದೆ ಈ ರೀತಿಯ ಕಿಡಿಗೇಡಿ ಕೃತ್ಯಗಳನ್ನು ನಡೆಸುತ್ತಿದ್ದರು.

ಪುಂಡ ಮಕ್ಕಳಿಗೆ ವರವಾದದು ಆನ್‌ಲೈನ್ ಅಟೆಂಡೆನ್ಸ್ ಶಾಲೆಗೆ ಬರುವ ಮಕ್ಕಳಿಗೆ ಭೌತಿಕ ಹಾಜರಾತಿ ನೀಡಲಾಗುತ್ತದೆ. ಆದರೆ ಶಾಲೆಗೆ ಬಾರದ ಮಕ್ಕಳಿಗೆ ಗೈರು ಹಾಜರಾತಿ ಹಾಕುವಂತಿಲ್ಲ. ಹಾಗಾಗಿ ಶಿಕ್ಷಕರು ಗೈರಾದ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಎಂದು ಹಾಜರಾತಿ ನೀಡುತ್ತಾರೆ. ಕೊರೊನಾ ಸಮಯವಾದ್ದರಿಂದ ಶಾಲೆಗೆ ಬಾರದೇ ಇರುವ ಮಕ್ಕಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದ ಈ ಬಾಲಕರು ಹಲವು ತರಲೆ ಕೆಲಸಗಳನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕೊನೆಗೆ ಮಕ್ಕಳ ಪೋಷಕರನ್ನು ಕರೆಸಿ ಶಾಲೆಯಲ್ಲೇ ಬುದ್ಧಿ ಹೇಳಿ ಬಿಟ್ಟು ಕಳುಹಿಸಿದ್ದಾರೆ. ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಎಚ್ಚರ ತೆಗೆದುಕೊಳ್ಳಿ ಎಂದು ತಿಳಿ ಹೇಳಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲೇ ಮಕ್ಕಳು ಈ ತರಹದ ಕೃತ್ಯಗಳಿಗೆ ಕೈ ಹಾಕುತ್ತಾರಲ್ಲಾ ಎಂದು ಸಾರ್ವಜನಿಕರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಷಕರು ಮತ್ತು ಶಿಕ್ಷಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರು ಕೂಡ ಮಕ್ಕಳು ದಾರಿ ತಪ್ಪುವುದು ಖಂಡಿತ. ಹಾಗಾಗಿ ತಮ್ಮ ಮಕ್ಕಳ ಬಗ್ಗೆ ಎಲ್ಲರೂ ಹೆಚ್ಚಿನ ನಿಗಾ ಇಡುವುದು ಅಗತ್ಯವಾಗಿದೆ. ಇಲ್ಲದೇ ಇದ್ದಲ್ಲಿ ಮುಂದೆ ಇವರುಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದಿರಬಹುದು.

- ವರದಿ: ‘ಸೋಲಾರ್’