ಹೆಬ್ಬಾಲೆ ಡಿ.೬ : ಇಲ್ಲಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಉತ್ಸವ ಭಾನುವಾರ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ನಡೆಯಿತು.
ಬಸವೇಶ್ವರ ಹಾಗೂ ಬನಶಂಕರಿ ದೇವಾಲಯ ಸಮಿತಿ ವತಿಯಿಂದ ಕೋವಿಡ್ ಮಾರ್ಗಸೂಚಿ ಅನ್ವಯ ದೇವಿಯ ವಾರ್ಷಿಕ ಉತ್ಸವ ಆಚರಿಸಲಾಯಿತು. ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆ ಭಾನುವಾರ ರಾತ್ರಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ಹಬ್ಬವನ್ನು ಆಚರಿಸಲಾಯಿತು.
ಹೆಬ್ಬಾಲೆ ಸುತ್ತಮುತ್ತಲಿನ ಗ್ರಾಮಸ್ಥರು ಶಕ್ತಿ ದೇವತೆ ಶ್ರೀ ಬನಶಂಕರಿ ದೇವಿ ದರ್ಶನ ಪಡೆದು ಪುನೀತರಾದರು. ಅಮ್ಮನವರ ಹಬ್ಬಕ್ಕೆ ವಿವಿಧೆಡೆ ನೆಲೆಸಿರುವ ಗ್ರಾಮಸ್ಥರು ಪಾಲ್ಗೊಂಡು ದೇವಿಯ ಆರಾಧಿಸುತ್ತ ತಾಯಿಯ ಕೃಪೆಗೆ ಪಾತ್ರರಾದರು.
ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ ೭ ಘಂಟೆ ಯಿಂದ ಗಣಪತಿ ಪೂಜೆ,ಪುಣಾಹಃ ರಕ್ಷಾಬಂಧನ ಧ್ವಜಾರೋಹಣ ನವಗ್ರಹ ಸ್ಥಾಪನೆ, ನವಗ್ರಹ ಪೂಜೆ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ
(ಮೊದಲ ಪುಟದಿಂದ) ಕೈಂಕರ್ಯಗಳು ನೆರವೇರಿದವು. ರಾತ್ರಿ ೧೦ ಗಂಟೆಗೆ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ವಿವಿಧ ಪುಷ್ಪಗಳಿಂದ ಹಾಗೂ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.ಬನದಲ್ಲಿ ಸ್ಥಾಪಿಸಲಾಗಿದ್ದ ಅಗ್ನಿಕುಂಡ ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮೆರವಣಿಗೆ ಸಂದರ್ಭ ಆಕರ್ಷಕ ಮದ್ದುಗುಂಡು ಬಾಣಬಿರುಸುಗಳ ಪ್ರದರ್ಶನ ಹಬ್ಬಕ್ಕೆ ವಿಶೇಷ ಮೆರಗು ನೀಡಿತು.ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಯಜಮಾನ್ ಬಸವರಾಜು ಹಾಗೂ ಕಾರ್ಯದರ್ಶಿ ರಾಜಪ್ಪ, ಸದಸ್ಯರು ಇದ್ದರು.
ಮೈನವಿರೇಳಿಸಿದ ಎತ್ತಿನ
ಗಾಡಿ ಓಟ ಸ್ಪರ್ಧೆ
ಶ್ರೀ ಬನಶಂಕರಿ ದೇವಿಯ ವಾರ್ಷಿಕ ಉತ್ಸವದ ಅಂಗವಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟ ಸ್ಪರ್ಧೆ ಜನಮನ ರಂಜಿಸಿತು.
ಸ್ಥಳೀಯ ಮಾದರಿ ಯುವಕ ಸಂಘ’ದ ವತಿಯಿಂದ ೨೦ನೇ ವರ್ಷದ ಎತ್ತಿನಗಾಡಿ ಓಡಿಸುವ ಸ್ಪರ್ಧೆ ನಡೆಯಿತು. ರೋಮಾಂಚನಕಾರಿ ಹಾಗೂ ಸಾಹಸ ಮಯ ಕ್ರೀಡೆಯನ್ನು ನೋಡಲು ಹೆಬ್ಬಾಲೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ಹಂಪಾಪುರ, ಸರಗೂರು, ಚಾಮರಾಜ ಕೋಟೆ, ಮಲ್ಲಿನಾಥಪುರ ಗ್ರಾಮ ಹಾಗೂ ಕೊಡಗು, ಮೈಸೂರು ಹಾಗೂ ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಗಳಿಂದ ೨೦ಕ್ಕೂ ಹೆಚ್ಚಿನ ಎತ್ತಿನಗಾಡಿ ಮಾಲೀಕರು ಪಾಲ್ಗೊಂಡಿದ್ದರು.
ಓಟದಲ್ಲಿ ೧೦೦ ಮೀಟರ್ ದೂರ ನಿಗದಿಪಡಿಸಲಾಗಿತ್ತು. ಮಧ್ಯಾಹ್ನ ೧ಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್. ಶ್ರೀನಿವಾಸ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಎತ್ತುಗಳು ಓಡುತ್ತಿದ್ದಂತೆ ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಹುರಿದುಂಬಿಸುತ್ತಿದ್ದರು.
ಕೆಲ ಎತ್ತುಗಳು ಯದ್ವಾತದ್ವ ಓಡುತ್ತ ಜನರತ್ತ ನುಗ್ಗಿದವು. ಎತ್ತಿನಗಾಡಿಗಳು ಸಮೀಪಕ್ಕೆ ಬರುತ್ತಿದ್ದಂತೆ ಜನರು ಹಿಂದೆ ಸರಿದರು. ಕೆಲವರು ಎತ್ತುಗಳನ್ನು ತಡೆಯಲೆತ್ನಿಸಿದರು. ಇದರಿಂದ ಅಪಾಯ ತಪ್ಪಿತು. ಸುಗ್ಗಿಗೆ ಮುನ್ನ ಈ ಸ್ಪರ್ಧೆ ನಡೆಯುತ್ತದೆ. ರೈತರು ಗಾಡಿ ಓಟಕ್ಕೆ ಎತ್ತುಗಳನ್ನು ತಯಾರು ಮಾಡುತ್ತಾರೆ.
ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಟಿ.ಜಗದೀಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಚಂದ್ರಕುಮಾರ್, ಖಜಾಂಚಿ ಭರತ್,ಸಹ ಕಾರ್ಯದರ್ಶಿ ಶಿವಕುಮಾರ್,ತೀರ್ಪುಗಾರರಾಗಿ ಲೋಹಿತ್ ಕುಮಾರ್, ಎಚ್.ಜೆ.ಕುಮಾರ್ ಇದ್ದರು.