ಮಡಿಕೇರಿ, ಡಿ. ೬: ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರನ್ನು ಪತ್ತೆಹಚ್ಚಿ ಕಸ ಎಸೆಯುವದನ್ನು ನಿಯಂತ್ರಿಸುವ ಸಲುವಾಗಿ ನಗರ ಸಭೆ ವತಿಯಿಂದ ಆಯ್ದ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸ ಲಾಗುತ್ತಿದೆ.

ನಗರದ ಕೆಲವು ಬಡಾವಣೆ ಗಳಲ್ಲಿ ಕಸ ಸಂಗ್ರಹ ವಾಹನ ಬರುತ್ತಿದ್ದರೂ ಕೂಡ ನಾಗರಿಕರು ರಾತ್ರಿ ವೇಳೆಯಲ್ಲಿ ಕಸವನ್ನು ತಂದು ರಸ್ತೆ ಬದಿಯಲ್ಲಿ ಸುರಿದು ಹೋಗುತ್ತಿರುವದು ಸಾಮಾನ್ಯವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಸ ಸುರಿಯುವ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಪ್ರಥಮವಾಗಿ ನಗರದ ೨ನೇ ವಾರ್ಡ್ನಲ್ಲಿ ಕ್ಯಾಮರಾ ಅಳವಡಿಸಲಾಯಿತು. ವಾರ್ಡ್ ಸದಸ್ಯ ಮಹೇಶ್ ಜೈನಿ ಮುಂದಾಳತ್ವದಲ್ಲಿ ಅಳವಡಿಸಲಾಯಿತು. ರಸ್ತೆ ಬದಿಯಲ್ಲಿ ಕಸ ಹಾಕುವವರನ್ನು ಕ್ಯಾಮರಾ ಮೂಲಕ ಪತ್ತೆಹಚ್ಚಿ ಅವರುಗಳಿಗೆ ನಗರಸಭೆ ಮೂಲಕ ದಂಡ ವಿಧಿಸಲಾಗುವದು ಎಂದು ಮಹೇಶ್ ಜೈನಿ ತಿಳಿಸಿದ್ದಾರೆ.