ಗೋಣಿಕೊಪ್ಪ ವರದಿ, ಡಿ. ೬: ಸೇವಾ ಮನೋಭಾವ ಹೆಚ್ಚಿಸಿ ಕೊಳ್ಳುವುದರಿಂದ ಆತ್ಮತೃಪ್ತಿ ಹೆಚ್ಚುತ್ತದೆ ಎಂದು ಅದಾನಿ ಗ್ರೂಪ್ ಕಾನೂನು ಸಲಹೆಗಾರ ಪುಗ್ಗೇರ ದೇವಯ್ಯ ಹೇಳಿದರು.
ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಹಾಗೂ ಗೋಣಿಕೊಪ್ಪ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಲಯನ್ಸ್ ಕ್ಲಬ್ ಪ್ರಾಂತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಹೆಚ್ಚು ಸೇವೆ ಮಾಡುವುದರಿಂದ ಆತ್ಮತೃಪ್ತಿ ಸಿಗುತ್ತದೆ. ನಾವು ಬೆಳೆದಂತೆ ದಾನ, ಸೇವೆ, ನೊಂದವರಿಗೆ ಮಿಡಿಯುವ ಗುಣ ರೂಡಿಸಿ ಕೊಳ್ಳಬೇಕಿದೆ ಎಂದರು. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಅಂಕಕ್ಕಾಗಿ ಒತ್ತಡ ಹೇರುವ ಮನಸ್ಥಿತಿಯಿಂದ ಪಾಲಕರು ಹೊರಬರಬೇಕಿದೆ. ಇದರಿಂದ ದೇಶಕ್ಕೆ ಹೆಚ್ಚು ಪ್ರತಿಭಾಶಾಲಿಗಳನ್ನು ನೀಡಲು ಅವಕಾಶವಿದೆ. ವಿದ್ಯಾಭ್ಯಾಸ ಸಂದರ್ಭ ಯಾವ ವಿದ್ಯಾರ್ಥಿಯನ್ನು ಭವಿಷ್ಯದಲ್ಲಿ ಯಾವ ರೀತಿ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯಬಹುದು ಎಂದು ನಿರ್ಧರಿಸಲು ಸಾಧ್ಯವಿಲ್ಲ. ಶಿಕ್ಷಣ ಪೂರ್ವ ಮತ್ತು ಶಿಕ್ಷಣದ ನಂತರ ವ್ಯಕ್ತಿಯಲ್ಲಿ ಸಾಕಷ್ಟು ಬೆಳವಣಿಗೆ ಕಾಣಲು ಸಾಧ್ಯವಿದೆ. ಇದನ್ನು ಅರಿತು ಶಿಕ್ಷಣ ನೀಡಬೇಕಿದೆ ಎಂದರು.
ಸಮ್ಮೇಳನವು ಸೇವಾ ಸಮರ್ಪಣೆಯ ವೇದಿಕೆ ಕಾರ್ಯಕ್ರಮ ವಾಗಿ ಮೂಡಿ ಬಂತು. ಜಿಲ್ಲೆಯ ೧೧ ಲಯನ್ಸ್ ಕ್ಲಬ್ಗಳಾದ ಗೋಣಿಕೊಪ್ಪ, ಮೂರ್ನಾಡು, ವೀರಾಜಪೇಟೆ, ನಾಪೋಕ್ಲು, ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ, ಅಮ್ಮತ್ತಿ, ಪಾಲಿಬೆಟ್ಟ, ಸಿದ್ದಾಪುರ ಕ್ಲಬ್ಗಳ ಪದಾಧಿಕಾರಿಗಳು ಸಮಾಜಕ್ಕೆ ನೀಡಿರುವ ಸೇವೆಗಳ ಮಾಹಿತಿ ಹಂಚಿಕೊAಡು ವಿಶೇಷತೆ ಮೂಡಿಸಿದರು. ಬ್ಯಾನರ್ ಪ್ರೆಸೆಂಟೇಷನ್ ಕಾರ್ಯಕ್ರಮದಲ್ಲಿ ತಮ್ಮ ಬ್ಯಾನರ್ ಹಿಡಿದು ವೇದಿಕೆಗೆ ಆಯಾ ಭಾಗದ ಕ್ಲಬ್ಗಳ ಪದಾಧಿಕಾರಿಗಳು ಆಗಮಿಸಿ ದರು. ನಂತರ ಕ್ಲಬ್ ವತಿಯಿಂದ ಸಮಾಜಕ್ಕೆ ನೀಡಿದ ಸೇವೆಯನ್ನು ತಿಳಿಸುವ ಪ್ರಯತ್ನ ನಡೆಯಿತು. ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು. ಸೇವೆ ನೀಡಿದ ಸದಸ್ಯರನ್ನು ಗುರುತಿಸುವ ಕಾರ್ಯ ನಡೆಯಿತು.
ನಿವೃತ್ತ ಸೇನಾಧಿಕಾರಿ ಕರುಂಬಯ್ಯ ಧ್ವಜರೋಹಣದ ಮೂಲಕ ದೇಶಭಕ್ತಿ ಮೂಡಿಸಿದರು. ಲಯನ್ಸ್ ಪ್ರಾಂತ್ಯದ ಪ್ರಥಮ ಮಹಿಳೆ ಜ್ಯೋತಿ ಉತ್ತಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ೧೧ ಕ್ಲಬ್ಗಳ ಸದಸ್ಯರು, ವಲಯ ಮುಖ್ಯಸ್ಥರು, ಸಲಹೆಗಾರರು, ವಲಯ ಕ್ಲಬ್ಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷ ಬೊಮ್ಮಂಡ ಬಿ. ಅಯ್ಯಪ್ಪ, ಪಾಲಿಬೆಟ್ಟ ಅಧ್ಯಕ್ಷ ಬಾಬು ರಾಘವನ್, ಮೂರ್ನಾಡು ಅಧ್ಯಕ್ಷ ಬಡುವಂಡ ಅಪ್ಪಚ್ಚು, ಸೋಮವಾರಪೇಟೆಯ ಮಲ್ಲಪ್ಪ, ಕುಶಾಲನಗರದ ರಾಜಶೇಖರ್, ನಾಪೋಕ್ಲುವಿನ ಮುಕ್ಕಾಟೀರ ವಿನಯ್, ಸುಂಟಿಕೊಪ್ಪದ ಕೋಟೇರ ಶಾಶ್ವತ್ ಬೋಪಣ್ಣ, ಸಿದ್ದಾಪುರದ ಪಟ್ಟಡ ವಿಶಾಲ್ ದೇವಯ್ಯ, ವೀರಾಜಪೇಟೆಯ ಬಿ.ಎಸ್. ಪುಷ್ಪರಾಜ್ ಭಾಗವಹಿಸಿದ್ದರು.
ಸನ್ಮಾನ : ಸಾರ್ವಜನಿಕ ಸೇವೆ ಪರಿಗಣಿಸಿ ಗೋಣಿಕೊಪ್ಪ ಲೋಪಮುದ್ರ ಮೆಡಿಕಲ್ ಸೆಂಟರ್ ಆಡಳಿತ ನಿದೇರ್ಶಕ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ, ಪರಿಸರ ಪ್ರೇಮಿ ನಿವೃತ್ತ ಚೆಪ್ಪುಡೀರ ಪಿ. ಮುತ್ತಣ್ಣ, ಸೇನಾ ತರಬೇತುದಾರ ಮಾರ್ಚಂಡ ಗಣೇಶ್ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಲಹೆಗಾರ ಸಿ.ಎ. ಮುತ್ತಣ್ಣ, ಲಯನ್ಸ್ ಪ್ರಾಂತ್ಯ ಮುಖ್ಯಸ್ಥ ಪಟ್ಟಡ ಧನು ಉತ್ತಯ್ಯ, ಪ್ರಾಂತ್ಯ ಸಮ್ಮೇಳನ ಆಡಳಿತ ಮಂಡಳಿ ಅಧ್ಯಕ್ಷ ಪಾರುವಂಗಡ ಎನ್. ಪೆಮ್ಮಯ್ಯ, ಖಜಾಂಚಿ ಸಚಿನ್ ಬೆಳ್ಯಪ್ಪ, ಕಾರ್ಯದರ್ಶಿ ಡಾ. ಮಚ್ಚಮಾಡ ಸೂರಜ್ ಉತ್ತಪ್ಪ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಪಾರುವಂಗಡ ಜೀವನ್, ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ, ಜಿಲ್ಲಾ ಗವರ್ನರ್ ವಸಂತಕುಮಾರ ಶೆಟ್ಟಿ, ಪ್ರಮುಖರಾದ ಶ್ಯಾಂ ಅಯ್ಯಪ್ಪ, ನಿಶಾಂತ್ ಮೆನೆಸಸ್, ಡಾ. ಪಂಚಮ್ ತಿಮ್ಮಯ್ಯ, ನವೀನ್ ಅಂಬೆಕಲ್, ಸವಿತಾ ಬೋಪಣ್ಣ, ಎಸ್.ಎನ್. ಯೋಗೇಶ್, ತ್ರಿಶೂಲ್ ಗಣಪತಿ, ಸಪಿ.ಪಿ ಬೋಪಣ್ಣ ಇದ್ದರು.