ಮಡಿಕೇರಿ, ಡಿ. ೫: ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗಾಗಿ ಇದೀಗ ನಾಲ್ಕು ದಿನಗಳ ಕಾಲಾವಧಿ ಮಾತ್ರ ಬಾಕಿ ಉಳಿದಿದೆ. ಸ್ಪರ್ಧಾಕಣದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳಾದ ಎಂ.ಪಿ. ಸುಜಾ ಕುಶಾಲಪ್ಪ ಹಾಗೂ ಡಾ. ಮಂಥರ್‌ಗೌಡ ಅವರುಗಳ ಸಹಿತವಾಗಿ ಪಕ್ಷದ ಪ್ರಮುಖರ ತಂಡವೇ ಬಿರುಸಿನ ಪ್ರಚಾರದಲ್ಲಿ ತೊಡಗಿದೆ.
ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮತದಾರರನ್ನು ಖುದ್ದಾಗಿ ಭೇಟಿ ಮಾಡುವ ಮೂಲಕ ಮತಯಾಚನೆ ನಡೆಯುತ್ತಿದೆ. ಅಲ್ಲಲ್ಲಿ ಪಕ್ಷದ ಮೂಲಕ ಸಭೆಗಳನ್ನೂ ಆಯೋಜಿಸಲಾಗುತ್ತಿದ್ದು, ತಮ್ಮ ತಮ್ಮ ಪಕ್ಷ ಹಾಗೂ ಅಭ್ಯರ್ಥಿಗಳ ಸಾಧನೆ - ಚಿಂತನೆಗಳ ಕುರಿತಾಗಿ ಮತದಾರರ ಗಮನ ಸೆಳೆಯಲಾಗುತ್ತಿದೆ.
ಎರಡೂ ಪಕ್ಷಗಳು ಈ ಬಾರಿ ನೇರ ಸ್ಪರ್ಧೆಯಲ್ಲಿರುವದು ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ವಿವಿಧ ರೀತಿಯ ರಾಜಕೀಯ ಲೆಕ್ಕಾಚಾರಗಳು ಗರಿಗೆದರುತ್ತಿವೆ. ಆರೋಪ - ಪ್ರತ್ಯಾರೋಪಗಳು ಸಾಮಾನ್ಯವಾಗಿದ್ದು, ಎರಡೂ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಡಿಸೆÀಂಬರ್ ೧೦ ರಂದು ಮತದಾನ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತದಿಂದಲೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.