ಸೋಮವಾರಪೇಟೆ, ಡಿ. ೬: ಸಮೀಪದ ನೇರುಗಳಲೆ ಪ್ರೌಢಶಾಲೆಯಲ್ಲಿ ಗ್ರಾಮಸ್ಥರು, ದಾನಿಗಳು, ಹಳೆ ವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಸಮಿತಿ, ಜನಪ್ರತಿನಿಧಿಗಳು ಹಾಗೂ ಶಿಕ್ಷಕರ ನೆರವಿನಿಂದ ರೂ. ೨.೫೦ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾವೇರಿ ಮಾತೆ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.
ಕಾವೇರಿ ಪ್ರತಿಮೆಯನ್ನು ಅನಾವರಣಗೊಳಿಸಿದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು, ನೇರುಗಳಲೆ ಪ್ರೌಢಶಾಲೆಯು ಹಲವು ವಿನೂತನ ಆವಿಷ್ಕಾರಗಳ ಮೂಲಕ ಗಮನ ಸೆಳೆದಿದೆ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ಸದಾ ಕ್ರಿಯಾಶೀಲರಾಗಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪದ್ಮಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಸದಸ್ಯರಾದ ಹೆಚ್.ಆರ್. ಪ್ರಕಾಶ್, ವಿನಯ್ ಸಂಭ್ರಮ್, ವಿನೋದ್, ಕೆ. ಅಜಿತ್ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಲೋಕಾನಂದ, ಪ್ರಮುಖರಾದ ಲಲಿತ ಸೇರಿದಂತೆ ಇತರರು ಭಾಗವಹಿಸಿದ್ದರು.
ಮೈಸೂರಿನ ವೈದ್ಯರಾದ ರವೀಂದ್ರಕುಮಾರ್ ಹಾಗೂ ಉದ್ಯಮಿ ರವಿಕುಮಾರ್ ಅವರುಗಳು ಸರ್ಕಾರಿ ಪ್ರೌಢಶಾಲೆಗೆ ೫ ಗ್ರೀನ್ ಬೋರ್ಡ್ ಹಾಗೂ ಭೋಜನಾಲಯ ನಿರ್ಮಾಣಕ್ಕೆ ೫೦ ಸಾವಿರ ಧನ ಸಹಾಯ ನೀಡಿದರು.
ಕಾರ್ಯಕ್ರಮದಲ್ಲಿ ರವೀಂದ್ರಕುಮಾರ್, ರವಿಕುಮಾರ್, ಸುಂದರವಾದ ಕಾವೇರಿ ಪ್ರತಿಮೆಯನ್ನು ನಿರ್ಮಿಸಿದ ತಮಿಳುನಾಡಿನ ಶಿಲ್ಪಿ ಶಕ್ತಿವೇಲು, ಹಳೆಯ ವಿದ್ಯಾರ್ಥಿಗಳಾದ ಜೋಶಿತ್, ಎಂ.ಸಿ. ತುಳಸಿ ಅವರುಗಳನ್ನು ಸನ್ಮಾನಿಸಲಾಯಿತು.
ಪ್ರೌಢಶಾಲೆಯ ಮುಖ್ಯಶಿಕ್ಷಕ ಕೃಷ್ಣೇಗೌಡ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ತಂಗಮ್ಮ, ಸೇರಿದಂತೆ ಶಿಕ್ಷಕರುಗಳು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು.