ಸೋಮವಾರಪೇಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಶಿಲ್ಪಿಗೆ ಜೈಕಾರ ಹಾಕಿದರು.

ದಲಿತ ಹಿತರಕ್ಷಣಾ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಶಿಲ್ಪಿಯ ಸ್ಮರಣೆ ಮಾಡಿದರು.

ಅಂಬೇಡ್ಕರ್ ಅವರ ಜೀವನವೇ ಶೋಷಿತ ಸಮಾಜಕ್ಕೆ ಪಾಠವಾಗಿದೆ. ದಮನಿತರ ಪರವಾಗಿ ಅವರು ತೋರಿದ ಕಾಳಜಿ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳ ಪಾಲನೆಯಿಂದ ಮಾತ್ರ ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ದಲಿತ ಹಿತರಕ್ಷಣಾ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಈ. ಜಯೇಂದ್ರ ಹೇಳಿದರು.

ಈ ಸಂದರ್ಭ ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್ಲು, ಕಾರ್ಯದರ್ಶಿ ಮಂಜುನಾಥ್, ಸದಸ್ಯರಾದ ಗಣೇಶ್, ಸಂಧ್ಯಾ, ರಾಜಪ್ಪ, ಜಯಮ್ಮ, ದಸಂಸ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್. ಪಾಲಾಕ್ಷ, ಕಾರ್ಯದರ್ಶಿ ವೀರೇಂದ್ರ, ತಾಲೂಕು ಅಧ್ಯಕ್ಷ ಜೆ.ಎಲ್. ಜನಾರ್ಧನ್, ಕಾರ್ಯದರ್ಶಿ ಸಂದೀಪ್, ಜಗದೀಶ್, ಇಂದ್ರೇಶ್, ಹೂವಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯೆ ಮೋಹಿನಿ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.