ಮಡಿಕೇರಿ, ಡಿ. ೬: ೨೦೨೧-೨೨ನೇ ಸಾಲಿನ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ತಾ.೬ ರಿಂದ ಪ್ರಾರಂಭವಾಗಿದ್ದು, ತಾ. ೧೦ರ ವರೆಗೆ ನಡೆಯಲಿದೆ. ಪಂದ್ಯಾವಳಿಗೆ ಮೈಸೂರಿನ ಕ್ರೆಸ್ಟಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಎಂ. ಅಬ್ದುಲ್ ಲತೀಫ್ ಅವರ ಪುತ್ರÀ ಪಿ.ಎಲ್. ಮೊಹಮ್ಮದ್ ಹರ್ಷದ್ ಅವರು ಆಯ್ಕೆಯಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸುಂಟಿಕೊಪ್ಪದ ಸಂತ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಅತ್ತೂರಿನ ಜ್ಞಾನಗಂಗಾ ವಿದ್ಯಾಸಂಸ್ಥೆ ಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಹರ್ಷದ್ ಅರುಣ್ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದರು.
ಮಡಿಕೇರಿ ಸಂತ ಮೈಕಲರ ಪಿ.ಯು. ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಇದೀಗ ಕ್ರೆಸ್ಟಾ ಕಾಲೇಜಿನಲ್ಲಿ ೨ನೇ ವರ್ಷದ ಬಿ.ಕಾಂ. ಪದವಿ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾರೆ. ಪ್ರೌಢ ಶಾಲೆಯಲ್ಲಿರುವಾಗಲೇ ಜಿಲ್ಲಾ ಚಾಂಪಿಯನ್ ಶಿಪ್ಗಳಲ್ಲಿ ಹಲವು ಬಾರಿ ಪ್ರಶಸ್ತಿ ಪಡೆದುಕೊಂಡಿದ್ದರು. ಕಾಲೇಜಿನಲ್ಲಿರುವಾಗ ೨ ಬಾರಿ ರಾಜ್ಯಮಟ್ಟಕ್ಕೆ ಕೂಡ ಆಯ್ಕೆಯಾಗಿದ್ದರು ಹಾಗೂ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಹಂತ ಕೂಡ ತಲುಪಿದ್ದರು.
ಶಿಕ್ಷಣದೊಂದಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋಚಿಂಗ್ ಕೂಡ ಇವರು ನೀಡುತ್ತಿದ್ದಾರೆ.
ಮೈಸೂರು ವಿವಿ ತಂಡದಲ್ಲಿ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಶಿವಪ್ರಸಾದ್, ವಿಶಾಲ್, ಸಚಿನ್, ಧ್ರುವ, ಸಂತೋಷ್ ಹಾಗೂ ಸೋಹನ್ ಅವರೊಂದಿಗೆ ಹರ್ಷದ್ ಅವರು ಕೂಡ ಭಾಗವಹಿಸಲಿದ್ದಾರೆ.