ಮಡಿಕೇರಿ, ಡಿ. ೫: ಮಡಿಕೇರಿ ಕೊಡವ ಸಮಾಜದಿಂದ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಪುತ್ತರಿ ಊರೊರ್ಮೆ ಕಾರ್ಯಕ್ರಮ ಇಂದು ಜರುಗಿತು. ಸಮಾಜದ ಸಭಾಂಗಣದಲ್ಲಿ ಮೊದಲು ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸಮಾಜದ ಏಳಿಗೆ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದ ಕೆ.ಎಸ್. ದೇವಯ್ಯ ಅವರು ಕೊಡವ ಜನಾಂಗದವರಿಗೆ ವಿಶೇಷ ಪ್ರಾತಿನಿಧ್ಯವಿದ್ದು, ಈ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕೊಡವ ಸಮಾಜ ಕಾರ್ಯೋನ್ಮುಖವಾಗಿದೆ. ಕೊಡವ ಜನಾಂಗದಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಸಂಸ್ಕೃತಿ, ಆಚಾರ, ವಿಚಾರ ಉಳಿಯಲು ಸಾಧ್ಯ ಎಂದು ಹೇಳಿದರು.

ಕೊರೊನಾ ಹಿನ್ನಲೆ ಕೊಡವ ಸಮಾಜಕ್ಕೆ ಆದಾಯ ಕುಂಠಿತ ಗೊಂಡಿದ್ದು, ಆರ್ಥಿಕವಾಗಿ ಭಾರೀ ಹೊಡೆತ ಬಿದ್ದಿದೆ. ಆದರೂ ಸಮಾಜದ ಏಳಿಗೆಯ ದೃಷ್ಠಿಯಿಂದ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕಾರ್ಯ ನಡೆಸಲಾಗಿದೆ. ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಎಲ್ಲಾ ಕೊಡವ ಸಮಾಜದ ಅಭಿವೃದ್ದಿಗೆ ೧೦ ಕೋಟಿ ಬಿಡುಗಡೆಯಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಸಮಾಜ ಒಕ್ಕೂಟದ ಮೂಲಕ ಕೊಡವ ಸಮಾಜಗಳಿಗೆ ಹಣ ವಿಂಗಡಣೆಯಾಗಲಿದ್ದು, ಅದಕ್ಕಾಗಿ ಕ್ರಿಯಾ ಯೋಜನೆ ಸಲ್ಲಿಸಿದ್ದೇವೆ. ಕೊಡವ ಸಮಾಜದ ಕೆಳಗಿನ ಕಲ್ಯಾಣ ಮಂಟಪ ಅಭಿವೃದ್ದಿಗೆ ೫೦ ಲಕ್ಷ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.

ಬಳಿಕ ನಡೆದ ಪುತ್ತರಿ ಊರೊರ್ಮೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರಾದ ಕಾಳಚಂಡ ಅಪ್ಪಣ್ಣ ಹಾಗೂ ಬಾಳೆಯಡ ಸಬಿತಾ ಅವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ಕೊಡವ ಸಮಾಜಗಳಲ್ಲಿ ಚುನಾವಣೆಗಳಿಲ್ಲದೆ ಆಡಳಿತ ಮಂಡಳಿ ರಚನೆಯಾಗ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿತಾ ಪೂವಯ್ಯ, ನಗರಸಭೆ ಅಧ್ಯಕ್ಷೆ ಯಾಗಿ ಇಡೀ ನಗರದ ಜವಾಬ್ದಾರಿ ನನ್ನ ಮೇಲಿದ್ದು, ಮಡಿಕೇರಿಯನ್ನು ಸುಂದರ ನಗರ ಮಾಡುವ ಅಭಿಲಾಷೆ ಇದೆ. ಕಸ ಮುಕ್ತಗೊಳಿಸುವ ಉದ್ದೇಶ ವಿದ್ದು, ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗು ವುದು. ಹಾಗೆಯೇ ಹಿರಿಯರ ಸಲಹೆ ಸೂಚನೆ ಹಾಗೂ ಸಹಕಾರದ ಅಗತ್ಯವಿದ್ದು, ಮಡಿಕೇರಿಯನ್ನು ಸ್ವಚ್ಛ ನಗರ ವನ್ನಾಗಿಸಲು ಎಲ್ಲರೂ ಕೈಜೋಡಿಸು ವಂತೆ ಮನವಿ ಮಾಡಿದ ಅವರು, ಕೊಡವರ ಸಂಸ್ಕೃತಿ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಮಡಿಕೇರಿ ಕೊಡವ ಸಮಾಜ ಆ ನಿಟ್ಟಿನಲ್ಲಿ ಹಲವು ಕಾರ್ಯ ಕ್ರಮಗಳನ್ನು ನಡೆಸಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಚೋವಂಡ ಕಾಳಪ್ಪ, ಗೌರವ ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಒಡ್ಡೋಲಗ ಸಹಿತ ನಗರದಲ್ಲಿ ರುವ ಮಂದ್‌ಗೆ ತೆರಳಲಾಯಿತು. ಅಲ್ಲಿ ಕೋಲಾಟ್, ಉಮ್ಮತಾಟ್, ಬೊಳಕಾಟ್ ನಂತಹ ಜನಪದ ನೃತ್ಯದ ಮೂಲಕ ಪುತ್ತರಿ ಊರೊರ್ಮೆಗೆ ತೆರೆಬಿತ್ತು.