ಸೋಮವಾರಪೇಟೆ, ಡಿ. ೫: ವಾಸದ ಮನೆ ಹಾಗೂ ತೋಟಕ್ಕೆ ತೆರಳುವ ರಸ್ತೆಗೆ ಕಳೆದ ೨೦೧೯ರಂದು ಬೇಲಿ ಹಾಕಿ ತಡೆಯೊಡ್ಡಲಾಗಿದ್ದು, ಈ ಬಗ್ಗೆ ತಾಲೂಕು ಕಚೇರಿಗೆ ದೂರು ನೀಡಿದ್ದರೂ ಯಾವುದೇ ಸ್ಪಂದನ ದೊರೆತಿಲ್ಲ. ನಡೆದಾಡಲು ರಸ್ತೆ ಸಿಗುವವರೆಗೂ ತಾಲೂಕು ಕಚೇರಿ ಎದುರು ಧರಣಿ ನಡೆಸುವುದಾಗಿ ಬಳಗುಂದ ನಿವಾಸಿ ಲೋಕೇಶ್ (ರವಿ) ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶವಿದ್ದರೂ ತಹಶೀಲ್ದಾರ್ ಅವರು ರಸ್ತೆ ತೆರವುಗೊಳಿಸಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ ತಾ. ೬ ರಂದು (ಇಂದು) ಬೆಳಿಗ್ಗೆ ೧೧ ಗಂಟೆಯಿAದ ತಾನೂ ಸೇರಿದಂತೆ ಪತ್ನಿ, ಪುತ್ರಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ತಾಲೂಕು ಕಚೇರಿ ಎದುರು ಧರಣಿ ನಡೆಸುತ್ತೇವೆ. ರಸ್ತೆಗೆ ಜಾಗ ಬಿಟ್ಟುಕೊಡುವವರೆಗೂ ಅಲ್ಲೇ ಉಳಿಯುತ್ತೇವೆ. ಮುಂದಿನ ಎಲ್ಲಾ ಬೆಳವಣಿಗೆಗೆ ತಹಶೀಲ್ದಾರ್ ನೇರ ಕಾರಣರಾಗಲಿದ್ದಾರೆ ಎಂದು ಲೋಕೇಶ್ ತಿಳಿಸಿದ್ದಾರೆ.