ವೀರಾಜಪೇಟೆ, ಡಿ. ೪: ನಾಯಿ ಅಡ್ಡಬಂದ ಪರಿಣಾಮ ನಿಯಂತ್ರಣ ಕಳೆದುಕೊಂಡ ಆಟೋ ಪಲ್ಟಿಯಾದ ಘಟನೆ ನಗರದ ಬೋಯಿಕೇರಿ ಬಳಿ ನಡೆದಿದೆ. ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮದ ನಿವಾಸಿ ಕೆ.ಎಸ್ ವಿನೋದ್ ತನ್ನ ಮಕ್ಕಳಾದ ದಿನೇಶ್ ದಿವಿತ ಮತ್ತು ದಿವ್ಯ ಜೊತೆಗೆ ಮನೆಯಿಂದ ವೀರಾಜಪೇಟೆಗೆ ತನ್ನ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಡ್ಡ ಬಂದಿದೆ ಇದನ್ನು ತಪ್ಪಿಸುವ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವಾಹನ ಪಲ್ಟಿಯಾಗಿದೆ.
ಆಟೋ ಚಾಲಕ ವಿನೋದ್ ಅವರ ಎಡ ಕೈಗೆ ಬಲವಾದ ಪೆಟ್ಟುಬಿದ್ದಿದೆ. ಮಗಳು ದಿವ್ಯಳಿಗೆ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ದಿನೇಶ್ ಮತ್ತು ದಿವಿತಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಕಂಡ ಸಾರ್ವಜನಿಕರು ಗಾಯಾಳುಗಳನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ವಿನೋದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೂ ಮಗಳು ದಿವ್ಯಳನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಕಿಶೋರ್ ಶೆಟ್ಟಿ