ಕಣಿವೆ, ಡಿ. ೩: ಬೆಂಬಿಡದ ಭೂತದಂತೆ ಕಾಡುತ್ತಿದ್ದ ಮಳೆಯಿಂದಾಗಿ ಕುಶಾಲನಗರ ತಾಲೂಕಿನ ಕೃಷಿಕರು ಬೆಳೆದಿದ್ದ ಜೋಳದ ಫಸಲು ಹಾಳಾಗುತ್ತಿದೆ.

ಕಳೆದ ದೀಪಾವಳಿಗೂ ಮುನ್ನಾ ಕಟಾವು ಮಾಡಿ ಹೊಲದಲ್ಲಿಟ್ಟಿದ್ದ ಜೋಳದ ಫಸಲು ಬಿಡದೇ ಕಾಡುತ್ತಿರುವ ಮಳೆಗೆ ಸಿಲುಕಿ ಜೋಳದ ಫಸಲಿನ ದಿಂಡುಗಳಲ್ಲಿ ಮೊಳಕೆಯೊಡೆಯುತ್ತಿದೆ. ಗುಡ್ಡೆಹೊಸೂರು ಬಳಿಯ ಅತ್ತೂರಿನ ಪ್ರಗತಿಪರ ಕೃಷಿಕ ಜರ್ಮಿ ಡಿಸೋಜ ಅವರು ತಮ್ಮ ಆರು ಎಕರೆ ಹೊಲದಲ್ಲಿ ಬೆಳೆದು ಕಟಾವು ಮಾಡಿದ್ದ ಮುಸುಕಿನ ಜೋಳದ ಫಸಲು ಅಪಾರ ಪ್ರಮಾಣದಲ್ಲಿ ಹಾಳಾಗಿದ್ದು ಲಕ್ಷಾಂತರ ನಷ್ಟವಾಗಿದೆ.

ಫಸಲು ಬಂದಿದ್ದ ಜೋಳದ ಫಸಲನ್ನು ಗಿಡಸಹಿತ ದೀಪಾವಳಿಗೂ ಮುನ್ನಾ ಕಟಾವು ಮಾಡಿದ್ದರು. ಆದರೆ ನಿರಂತರ ಮಳೆಯಿಂದಾಗಿ ಕಟಾವು ಮಾಡಿದ ಜೋಳದ ಫಸಲನ್ನು ಬಿಡಿಸಿ ಒಣಗಿಸಲು ಸಾಧ್ಯವಾಗದೇ ಹೊಲದಲ್ಲೇ ಗುಡ್ಡೆ ಹಾಕಿ ಇಟ್ಟಿದ್ದರು. ಈಗ ಕಳೆದ ಮೂರು ದಿನಗಳಿಂದ ಒಂದಿಷ್ಟು ಮಳೆ ಪ್ರಮಾಣ ಕ್ಷೀಣಿಸಿದ್ದರಿಂದಾಗಿ ಮಂಗಳವಾರದಿAದ ಸುಮಾರು ೩೦ ಕಾರ್ಮಿಕರನ್ನು ಕರೆದುಕೊಂಡು ಜೋಳದ ಫಸಲನ್ನು ಬಿಡಿಸಲು ಮುಂದಾದಾಗ ಜೋಳದ ಫಸಲು ಇಟ್ಟಲ್ಲಿಯೇ ಬಹುತೇಕ ಪ್ರಮಾಣದಲ್ಲಿ ಮೊಳಕೆಯೊಡೆದು ಹಾನಿಯಾಗಿದೆ.

ಈ ಬಗ್ಗೆ ಸ್ಥಳಕ್ಕೆ ತೆರಳಿದ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಕೃಷಿಕ ಜರ್ಮಿ ಡಿಸೋಜ, ಕಾಡಂಚಿನ ಗ್ರಾಮಗಳ ಕೃಷಿಕರಾದ ನಾವುಗಳು ಬೆಳೆಯುವ ಯಾವುದೇ ಫಸಲುಗಳು ಪ್ರತಿ ವರ್ಷ ಕಾಡಾನೆಗಳ ಪಾಲಾಗುತ್ತಿದ್ದವು. ಕಾಡಾನೆಗಳು ಉಳಿಸಿದ ಫಸಲನ್ನು ಜೋಪಾನ ಮಾಡಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದೆವು. ಆದರೆ ಈ ಬಾರಿ ಕಾಡಾನೆಗಳ ಜೊತೆಗೆ ಮಳೆಯ ಕಾಟ ವಿಪರೀತವಾದ್ದರಿಂದ ಕೈಗೆ ಬಂದ ಜೋಳದ ಫಸಲು ಬಹುತೇಕ ಹಾನಿಯಾಗಿದೆ. ಇದರಿಂದ ನಮಗೆ ಅಪಾರ ನಷ್ಟವಾಗಿದೆ. ನವೆಂಬರ್‌ನಲ್ಲಿ ಈ ರೀತಿಯ ಜಡಿ ಮಳೆ ಸುರಿದರೆ ಕೃಷಿಕನ ಪಾಡೇನು? ಸರ್ಕಾರ ಹಾಗೂ ಜಿಲ್ಲಾಡಳಿತ ತುರ್ತಾಗಿ ಬೆಳೆನಷ್ಟಕ್ಕೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾಗೆಯೇ ಅತ್ತೂರಿನ ಧರ್ಮ ಎಂಬ ಬೆಳೆಗಾರರಿಗೆ ಸೇರಿದ ಕಟಾವಿಗೆ ಬಂದAತಹ ಕಾಫಿ ಫಸಲು ಗುರುವಾರ ಸುರಿದ ಮಳೆಗೆ ಗಿಡದಿಂದ ಉದುರಿದೆ. ಒಟ್ಟಾರೆ ಈ ಬಾರಿ ವರುಣನ ಉಪಟಳಕ್ಕೆ ಕೃಷಿಕರ ಬದುಕು ಕೃಷವಾಗಿದೆ. ಸರ್ಕಾರ ಕೂಡಲೇ ನೊಂದ ಕೃಷಿಕರ ಕಂಬನಿ ಒರೆಸಬೇಕಿದೆ.

- ಕೆ.ಎಸ್. ಮೂರ್ತಿ