ಮಡಿಕೇರಿ, ಡಿ. ೨: ತಾ. ೪ರಂದು (ನಾಳೆ) ಕಾಂಗ್ರೆಸ್ ಕಚೇರಿಯಲ್ಲಿ ಸಾಕಷ್ಟು ಮಂದಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕ್ರಮ ಸಂಜೆ ೫.೩೦ ಗಂಟೆಗೆ ನಡೆಯಲಿದೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಂಘಟನಾ ಕಾರ್ಯದಲ್ಲಿ ತೊಡಗಿದ್ದು, ಮಡಿಕೇರಿ ನಗರದಲ್ಲಿ ವಾರ್ಡ್ ಸಮಿತಿ ರಚನೆ ಪ್ರಗತಿಯಲ್ಲಿದೆ ಎಂದರು. ಮಡಿಕೇರಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇವುಗಳನ್ನು ಬಗೆಹರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಮಕ್ಕಳು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ಸಮಸ್ಯೆ ಬಿಗಡಾಯಿಸಿ ಪ್ರಾಣಹಾನಿ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನಗರಸಭೆಯಲ್ಲಿ ಕಡತಗಳು ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಜೊತೆಗೆ ಕಡತಗಳು ಕಾಣೆಯಾಗುತ್ತಿವೆ. ಬಿಜೆಪಿಯನ್ನು ಮಡಿಕೇರಿ ಜನತೆ ನಂಬಿಕೆಯಿಟ್ಟು ಗೆಲ್ಲಿಸಿದ್ದು, ಆ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ನಗರದ ಅವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮಡಿಕೇರಿ ನಗರದ ಉಪಾಧ್ಯಕ್ಷರಾದ ಸದಾ ಮುದ್ದಪ್ಪ, ಯಾಕೂಬ್ ಉಪಸ್ಥಿತರಿದ್ದರು.