ಮಲ್ಲೇಶ್ ಅಂಬುಗ

ವೀರಾಜಪೇಟೆ, ಡಿ. ೨: ದಲಿತ ಸಮಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ದಲಿತ ಕುಟುಂಬಗಳು ಮುಂದಾಗ ಬೇಕು ಎಂದು ದಲಿತ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹಾಸನದ ಮಲ್ಲೇಶ್ ಅಂಬುಗ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಕೊಡಗು ಜಿಲ್ಲಾ ಸಮಿತಿ ರಚನೆ ಹಾಗೂ ದಲಿತ ಸಮಿತಿಯ ೫೦ನೇ ವರ್ಷಚಾರಣೆಯ ಅಂಗವಾಗಿ ವೀರಾಜಪೇಟೆ ಬಳಿಯ ಕುಕ್ಲೂರು ಕುಂದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಮೇಲು ಕೀಳು ಎಂಬ ಭಾವನೆಯಿಂದ ದಲಿತರು ದೇವಾಲಯಗಳಿಗೆ ಹೋಗುವಂತಿ ರಲಿಲ್ಲ. ಅಂಬೇಡ್ಕರ್ ಅವರ ಸಂವಿಧಾನ ರಚನೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಮತ್ತು ಬಡ ಕಾರ್ಮಿಕರಿಗಾಗಿ ಕಾನೂನುಗಳನ್ನು ರಚಿಸಿ ಜಾರಿಗೆ ತಂದ ಬಳಿಕ ದಲಿತರಿಗೆ ಶಿಕ್ಷಣ ದೊರಕು ವಂತಾಯಿತು. ದಲಿತರ ಪರ ಹಲವು ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರು ಚಲೋ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೀತಿ ಸಂಹಿತೆ ಜಾರಿಯಾದ ಕಾರಣ ತಾ. ೨೮ಕ್ಕೆ ಮುಂದೂಡಲಾಗಿದೆ ಎಂದರು.

ಮೈಸೂರು-ಕೊಡಗು ವಿಭಾಗೀಯ ಸಂಚಾಲಕ ಚಾಮರಾಜ ನಗರದ ಕೆ. ಸಿದ್ದರಾಜು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾಭ್ಯಾಸಕ್ಕೆ ಅವರ ಪೋಷಕರು ಸಹಕಾರ ನೀಡಿದಂತೆ ಪ್ರತಿಯೊಬ್ಬ ದಲಿತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು. ಜಾತಿ ಮೇಲುಕೀಳು ಅನ್ನೊದಕ್ಕಿಂತ ಮನುಷ್ಯ ಧರ್ಮವೆ ಮುಖ್ಯ, ದೇವಾಲಯ ಗಳನ್ನು ಕಟ್ಟಿದಂತೆ ಗ್ರಂಥಾಲಯ ಮತ್ತು ಶಾಲೆಗಳನ್ನು ಹೆಚ್ಚಿಸಬೇಕು ಇದರಿಂದ ಪ್ರತಿಯೊಬ್ಬರಿಗೂ ಜ್ಞಾನಶಕ್ತಿ ಮತ್ತು ಬದುಕುವುದನ್ನು ಕಲಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಯಾರು ಮಾರಾಟ ಆಗಬಾರದು. ಭಗವಾನ್ ಬುದ್ದ ಮತ್ತು ಅಂಬೇಡ್ಕರ್ ಅವರ ಗುರಿ ಒಂದೇ ಆಗಿತ್ತು. ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕು. ಮಹಿಳೆಯರಿಗೆ ಸಮಾನವಾದ ಹಕ್ಕು ಸಿಗಬೇಕು ಎಂದರು. ರಾಜ್ಯ ಸಮಿತಿಯ ಮಂಗಳೂರಿನ ಎಲ್. ಚಂದು ಮಾತನಾಡಿ, ಜಾತಿ ಬಿಟ್ಟು ದೇಶ ಕಟ್ಟು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ದಲಿತ ಸಂಘರ್ಷ ಸಮಿತಿಯನ್ನು ಉಳಿಸಿ ಬೆಳೆಸಲು ಹಿಂದೆ ಹಿರಿಯರು ಮತ್ತು ರಾಜ್ಯ ನಾಯಕರು ಶ್ರಮ ಪಟ್ಟಿದ್ದಾರೆ. ನಾವುಗಳು ಗ್ರಾಮ ಮಟ್ಟದಲ್ಲಿ ದಲಿತ ಸಂಘಟನೆಯನ್ನು ಬಲಪಡಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕಾಗಿದೆ ಎಂದರು.

ಶಿವಮೊಗ್ಗ ದಲಿತ ಸಮಿತಿಯ ಜಿಲ್ಲಾ ಸಂಚಾಲಕ ಹಾಲೇಶಪ್ಪ ಮಾತನಾಡಿ, ದಲಿತ ಸಮಿತಿ ಹುಟ್ಟಿ ಅನೇಕ ದಶಕಗಳು ಕಳೆದರೂ ದಲಿತರಿಗೆ ಬವಣೆ ತಪ್ಪಿಲ್ಲ. ಸಮಾಜ ದಲ್ಲಿ ಸಮಾನತೆಯ ಅವಶ್ಯವಿದೆ. ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಅವರ ಶ್ರಮದಿಂದ ದಲಿತರಿಗೆ ಮತದಾನದ ಹಕ್ಕು ದೊರಕಿ ದಂತಾಗಿದೆ ಎಂದರಲ್ಲದೆ ಸಂವಿಧಾನ ರಕ್ಷಣೆ ಮಾಡುವುದು ನಮ್ಮ ಹೊಣೆ. ದಲಿತ ಸಮಿತಿ ಸದೃಢವಾಗಿರಲು ಮತ್ತು ದೇಶವನ್ನು ರಕ್ಷಣೆ ಮಾಡಲು ಯುವಕರು ಸಮಿತಿಯಲ್ಲಿ ತೊಡಗಿಸಿ ಕೊಂಡು ಕಾರ್ಯನಿರ್ವಹಿಸಬೇಕು ಎಂದರು.

ದಲಿತ ಸಮಿತಿ ಕೊಡಗು ಜಿಲ್ಲಾ ಸಂಚಾಲಕ ಹೆಚ್.ಆರ್. ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ, ಆಂತರಿಕ ಸಮಿತಿಯ ವಿದ್ಯಾಧರ, ಜಿಲ್ಲಾ ಸಮಿತಿಯ ಮನು, ಷಣ್ಮುಗ, ತಾಲೂಕು ಸಮಿತಿಯ ಹೆಚ್.ಪಿ. ಲವ, ಅನಂತು ಉಪಸ್ಥಿತರಿದ್ದರು. ತಾಲೂಕು ಸಂಚಾಲಕಿ ಹೆಚ್.ಕೆ. ಸರೋಜ ಸ್ವಾಗತಿಸಿ, ನಿರೂಪಿಸಿದರು. ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು.