ಮಡಿಕೇರಿ, ಡಿ. ೩: ಕಡು ಬಡವರು ಹಾಗೂ ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಬಾರದೆಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಕಡು ಬಡವರು ಹಾಗೂ ಕಾರ್ಮಿಕರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದುವ ಎಲ್ಲಾ ಅರ್ಹತೆಗಳಿದ್ದರೂ ಎಪಿಎಲ್ ಕಾರ್ಡ್ ನೀಡಲಾಗುತ್ತಿದ್ದು, ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ. ಇದರಿಂದಾಗಿ ಸರಕಾರದ ಯಾವುದೇ ಸೌಲಭ್ಯ ದೊರೆಯದಂತಾಗಿದೆ, ಪ್ರತಿದಿನ ದುಡಿದು ತಿನ್ನುವವರಿಗೆ ದುಬಾರಿ ಬೆಲೆಯ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಬಿಪಿಎಲ್ ಕಾರ್ಡ್ನ್ನು ರದ್ದುಗೊಳಿಸಿರುವುದರಿಂದ ಅನೇಕ ಬಡ ಕುಟುಂಬಗಳು ಊಟಕ್ಕೂ ಕಷ್ಟ ಪಡುವಂತಾಗಿದೆ. ಕೇವಲ ವಾಹನವಿದೆ ಎನ್ನುವ ಕಾರಣವನ್ನು ಮುಂದಿಟ್ಟು ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಸರಿಯಾದ ಕ್ರಮವಲ್ಲ ಎಂದು ಕೆ.ಜಿ. ಪೀಟರ್ ಅಸಮಾಧಾನ ವ್ಯಕ್ತಪಡಿಸಿದರು.
ಯಾರ ಗಮನಕ್ಕೂ ತಾರದೆ ಪಡಿತರ ಚೀಟಿಗಳ ಪರಿಷ್ಕರಣೆಯನ್ನು ಮಾಡಲಾಗುತ್ತಿದ್ದು, ಬಡವರು ಗೊಂದಲಕ್ಕೀಡಾಗುತ್ತಿದ್ದಾರೆ. ಆದ್ದರಿಂದ ಪಡಿತರ ಚೀಟಿಗಳ ಬದಲಾವಣೆ ಬಗ್ಗೆ ಜನರಿಗೆ ಆಯಾ ನ್ಯಾಯ ಬೆಲೆ ಅಂಗಡಿಗಳ ಮೂಲಕವೇ ಮಾಹಿತಿ ನೀಡಬೇಕೆಂದು ಪೀಟರ್ ಒತ್ತಾಯಿಸಿದರು. ಕಾರ್ಯದರ್ಶಿ ಎಂ.ಎ. ಫಯಾಝ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.