ಮಡಿಕೇರಿ, ಡಿ. ೩: ವಕೀಲರ ಬಳಿ ನೊಂದಿರುವ ವ್ಯಕ್ತಿಗಳು ನ್ಯಾಯ ಕೋರಿ ಬರುತ್ತಾರೆ ಅಂತಹವರಿಗೆ ನ್ಯಾಯ ಒದಗಿಸುವದು ವಕೀಲರ ಧ್ಯೇಯವಾಗಿರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಬ್ರಮಣ್ಯ ಅವರು ಹೇಳಿದರು.
ಮಡಿಕೇರಿ ವಕೀಲರ ಸಂಘದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತ ನಾಡಿದರು. ವಕೀಲ ವೃತ್ತಿ ವಿಭಿನ್ನ ವೃತ್ತಿ ಎಂಬ ಅಭಿಪ್ರಾಯಗಳಿದ್ದು, ಅದನ್ನು ಕಾಪಾಡಿಕೊಳ್ಳಬೇಕು, ಸಮಾಜದಲ್ಲಿ ನೊಂದಿರುವ ವ್ಯಕ್ತಿಗಳು ನ್ಯಾಯಕ್ಕಾಗಿ ವಕೀಲರ ಬಳಿ ಬರುತ್ತಾರೆ, ಅಂತಹವರಿಗೆ ಸತತ ಪರಿಶ್ರಮದಿಂದ ನ್ಯಾಯ ಒದಗಿಸಿ ಕೊಡಬೇಕೆಂದು ಹೇಳಿದರು. ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು, ಡಾ. ಬಾಬು ರಾಜೇಂದ್ರ ಪ್ರಸಾದ್, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹಾನ್ ಹೋರಾಟ ಗಾರರೆಲ್ಲರೂ ವಕೀಲರಾಗಿದ್ದವರು ಎಂದುಕೊಳ್ಳಲು ಹೆಮ್ಮೆಯೆನಿಸುತ್ತದೆ, ಅಷ್ಟೇ ಸಾಲದು ನಾವುಗಳು ಕೂಡ ಅವರುಗಳ ಆದರ್ಶ, ವ್ಯಕ್ತಿತ್ವಗಳನ್ನು ಮೈಗೂಡಿಸಿ ಕೊಂಡು ಬದುಕಿದರೆ ವಕೀಲ ವೃತ್ತಿ ಆಯ್ಕೆ ಮಾಡಿ ಕೊಂಡಿರುವದಕ್ಕೆ ಸಾರ್ಥಕವಾಗಲಿದೆ ಎಂದು ಸಲಹೆ ಮಾಡಿದರು.
ನ್ಯಾಯಾಧೀಶರುಗಳಾಗಿ ಕೆಲಸ ಮಾಡುವಾಗ ಒತ್ತಡಗಳು ಬರುವದು ಸಹಜ, ಒತ್ತಡಗಳಿಗೆ ಒಳಗಾಗದೆ ಧೈರ್ಯವಾಗಿ ತಮಗೆ ದೊರೆತ್ತಿರುವ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕತೆಯಿಂದ
(ಮೊದಲ ಪುಟದಿಂದ) ತೀರ್ಪು ನೀಡಬೇಕು. ನ್ಯಾಯದ ಬಾಗಿಲು ಬಡಿಯುವವರಿಗೆ ನ್ಯಾಯ ಕೊಡಿಸಬೇಕು; ಒತ್ತಡಕ್ಕೆ ಒಳಗಾದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ನಮ್ಮ ಪರಿಮಿತಿಯನ್ನು ಬಿಟ್ಟು ತೀರ್ಪು ನೀಡಿದರೆ ಆತ್ಮಸಾಕ್ಷಿಗೆ ದ್ರೋಹ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರಾಗುವವರು ಎಚ್ಚರ ವಹಿಸಬೇಕೆಂದು ಕಿವಿಮಾತು ಹೇಳಿದರು.
ಅತಿಥಿಯಾಗಿದ್ದ ನಗರ ಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ; ತಾನು ಅಧ್ಯಕ್ಷೆಯಾಗಿದ್ದರೂ ಓರ್ವ ವಕೀಲೆ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ, ವಕೀಲ ವೃತ್ತಿಗೆ ಸಿಗುವ ಗೌರವ ಬೇರೆಲ್ಲೂ ಸಿಗುವದಿಲ್ಲ, ತಾನು ರಾಜಕೀಯಕ್ಕೆ ಬರಲು ಈ ವೃತ್ತಿಯೇ ವೇದಿಕೆ ಎಂದು ಹೇಳಿದರು. ಮಡಿಕೇರಿ ನಗರವನ್ನು ಸ್ವಚ್ಛವಾದ ಅಭಿವೃದ್ಧಿಯತ್ತ ಕೊಂಡೊಯ್ಯ ಬೇಕೆಂಬದು ತನ್ನ ಕನಸಾಗಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ಮತ್ತೋರ್ವ ಅತಿಥಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಪಿ.ಕೆ. ದಿವ್ಯ ತಾನು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಲು ಪಟ್ಟ ಶ್ರಮ ಹಾಗೂ ಸಹಕಾರ ನೀಡಿದವರನ್ನು ನೆನಪಿಸಿಕೊಂಡರಲ್ಲದೆ, ನೈಜವಾಗಿ ಸಹಾಯ ಬೇಕಾಗಿರುವವರಿಗೆ ಸಹಾಯ ಮಾಡಬೇಕು, ಸಾಧನೆ ಮಾಡಲು ಕನಸು ಕಾಣಬೇಕು, ಕನಸು ನನಸಾಗಿಸಲು ಗುರಿ ಹೊಂದಿರಬೇಕೆAದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಮಾತನಾಡಿ, ವಕೀಲರು ಘನತೆ, ಗೌರವ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಿದರೆ ಸಂಘಕ್ಕೆ ಬೆಲೆ ಬರುತ್ತದೆ, ವಕೀಲರು ಸಮಾಜವನ್ನು ಒಡೆಯುವ ಕೆಲಸ ಮಾಡದೆ ಸಮಾಜವನ್ನು ಬೆಸೆಯುವ ಕೆಲಸ ಮಾಡಬೇಕೆಂದು ಹೇಳಿದರು. ಸ್ವಾಸ್ತö್ಯ ಸಮಾಜ ನಿರ್ಮಾಣದಲ್ಲಿ ಪಾತ್ರ ವಹಿಸೋಣ, ಪರೋಪಕಾರಿ ಕೆಲಸ ಮಾಡಿದರೆ ಪುಣ್ಯ ಸಿಗುತ್ತದೆ, ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋಣ ಎಂದು ಹೇಳಿದರಲ್ಲದೆ, ಯುವ ವಕೀಲರಿಗೆ ಸಾಧಿಸಲು ಸಾಕಷ್ಟು ಅವಕಾಶಗಳಿವೆ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಪಿ.ಕೆ. ದಿವ್ಯ, ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರುಗಳನ್ನು ಸನ್ಮಾನಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ನೋಟರಿ ಹೊನ್ನಪ್ಪ ಹಾಗೂ ಯುವ ವಕೀಲ ದೀಪಕ್ ಅವರುಗಳ ಭಾವಚಿತ್ರ ಅನಾವರಣಗೊಳಿಸಿ, ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ನಿರ್ದೇಶಕರು ಗಳಾದ ದಿವ್ಯ ಹಾಗೂ ಲತಾ ಕುಮಾರಿ ಪ್ರಾರ್ಥಿಸಿದರೆ, ಕಾರ್ಯದರ್ಶಿ ಎಂ.ಕೆ. ಅರುಣ್ಕುಮಾರ್ ಸ್ವಾಗತಿಸಿದರು. ಗಾಯಕ ರಚನ್ ಪೊನ್ನಪ್ಪ ಹಾಡು ಹಾಡಿ ರಂಜಿಸಿದರು. ಉಪಾಧ್ಯಕ್ಷ ರತನ್ ತಮ್ಮಯ್ಯ ವಂದಿಸಿದರು.