ಸುಂಟಿಕೊಪ್ಪ, ಡಿ. ೩: ಈ ವರ್ಷ ಮಳೆಯಿಂದಾಗಿ ಕೃಷಿಕರ ಬಹುಪಾಲು ಕೃಷಿಯು ನಾಶವಾಗಿದ್ದು ಒಂದೆಡೆಯಾದರೆ ಸುಂಟಿಕೊಪ್ಪದ ಹೋಬಳಿಯ ವ್ಯಾಪ್ತಿಯಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಕಾಫಿ ತೋಟ ಹಾಗೂ ಕೃಷಿ ಭೂಮಿಯಲ್ಲಿ ಕಾಡಾನೆಯ ಹಾವಳಿ ಎಲೆಮೀರಿದೆ; ಕೃಷಿ ಫಸಲುಗಳನ್ನು ತಿಂದು ನಾಶಗೊಳಿಸುತ್ತಿದೆ. ಇದರಿಂದ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ.

೭ನೇ ಹೋಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ತೊಂಡೂರು ಗ್ರಾಮದಲ್ಲಿರುವ ಡಿ ನರಸಿಂಹ ಅವರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು ಪ್ರಸವದ ವೇಳೆ ವೇದನೆಯಿಂದ ಕಾಫಿ ತೋಟದಲ್ಲಿ ನಡೆದಾಡಿದ ಕಾರಣ ತೋಟದಲ್ಲಿರುವ ಕಾಫಿ, ಸಪೋಟ ಬಾಳೆ ಹಾಗೂ ಕಿತ್ತಳೆ ಫಸಲುಗಳನ್ನು ನಾಶ ಮಾಡಿ ಅಂದಾಜು ೨೦ ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲೇ ಕಾಡಾನೆಗಳ ಗುಂಪು ಬೀಡುಬಿಟ್ಟಿದೆ ಹೊಸಕೋಟೆ, ಕಂಬಿಬಾಣೆ, ಗ್ರಾಮಗಳ ಸುತ್ತಮುತ್ತಲಿನ ತೋಟಗಳ ಫಸಲನ್ನು ಧ್ವಂಸಗೊಳಿಸುತ್ತಿವೆ.

ಕಾಫಿ ಬೆಳೆಗಾರ ಡಿ. ನರಸಿಂಹ ಮಾತನಾಡಿ, ತೋಟದಲ್ಲಿಯೇ ಕಾಡಾನೆಗಳು ನೆಲೆಯೂರಿದ್ದು ಅನೇಕ ಫಸಲುಗಳನ್ನು ನಷ್ಟಪಡಿಸಿವೆ. ಕಾಡಾನೆಗಳು ಸಂಚರಿಸುವ ಸ್ಥಳಗಳಲ್ಲಿ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿವೆ. ನಿರಂತರ ಮಳೆಯಿಂದ ಕಾಫಿ, ಕಾಳು ಮೆಣಸು. ಭತ್ತ ನೆಲಕಚ್ಚಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೊತೆಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿಕರು ತತ್ತರಿಸಿದ್ದಾರೆ. ಆನೆಗಳ ಹಾವಳಿ ಹೀಗೆಯೆ ಮುಂದುವರೆದರೆ ಜೀವನ ಸಾಗಿಸುವುದಕ್ಕೂ ಕಷ್ಟ ಪಡಬೇಕಾಗುತ್ತದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆಗಳ ಹಾವಳಿಯನ್ನು ಕೂಡಲೇ ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ರೈತರು ಕೃಷಿಯನ್ನು ನಂಬಿ ಜೀವನ ಸಾಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.