ಜವಾದ್ ಚಂಡಮಾರುತ-ಒಡಿಶಾ, ಆಂಧ್ರಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ

ನವದೆಹಲಿ, ಡಿ. ೩: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾದ ಪರಿಣಾಮ ಸೃಷ್ಟಿಯಾಗಿರುವ ಜವಾದ್ ಚಂಡಮಾರುತ ಶನಿವಾರ ಒಡಿಶಾ ಮತ್ತು ಆಂಧ್ರಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಹವಾಮಾನ ಇಲಾಖೆ, ವಾಯುಭಾರ ಕುಸಿತದಿಂದಾಗಿ ಜವಾದ್ ಚಂಡಮಾರುತ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದ್ದು, ಮುಂದಿನ ೧೨ ಗಂಟೆಗಳಲ್ಲಿ ಸೈಕ್ಲೋನಿಕ್ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಚಂಡಮಾರುತದಿAದ ಭಾರೀ ಮಳೆಯಾಗಲಿದೆ. ಶನಿವಾರ ಬೆಳಿಗ್ಗೆ ಆಂಧ್ರ ಪ್ರದೇಶದ ಉತ್ತರ ಭಾಗ ಮತ್ತು ಒಡಿಶಾದ ದಕ್ಷಿಣ ಕರಾವಳಿಯ ಸಮೀಪವಿರುವ ಪ್ರದೇಶವನ್ನು ತಲುಪುವ ನಿರೀಕ್ಷೆಯಿದೆ. ಈ ಎರಡೂ ರಾಜ್ಯಗಳಲ್ಲಿ ಮುಂದಿನ ೨೪ ಗಂಟೆಗಳ ಕಾಲ ಗಂಟೆಗೆ ೫೦ ರಿಂದ ೬೦ ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರದಲ್ಲೂ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.