ಕುಶಾಲನಗರ, ಡಿ. ೨: ಹಾರಂಗಿ ಅಣೆಕಟ್ಟು ಸುರಕ್ಷತೆ ಪುನಶ್ಚೇತನ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ದೆಹಲಿಯಿಂದ ತಜ್ಞರ ತಂಡ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದೆ.

ಮಾದಾಪುರ ಕಾಫಿ ಬೆಳೆಗಾರ ನಂದ ಬೆಳ್ಯಪ್ಪ ಮತ್ತಿತರರು ಹಾರಂಗಿ ಜಲಾಶಯದಿಂದ ಆಗುವ ಅನಾಹುತಗಳ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ವರದಿ ಸಲ್ಲಿಸಲು ಆದೇಶ ನೀಡಿದ್ದು, ತಕ್ಷಣ ಹಾರಂಗಿ ಅಣೆಕಟ್ಟು ಮತ್ತು ಪ್ರದೇಶದ ವಾಸ್ತವಾಂಶದ ಸಮಗ್ರ ಮಾಹಿತಿಯನ್ನು ಒದಗಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತಜ್ಞರ ತಂಡ ಪರಿಶೀಲನೆ ನಡೆಸಿದೆ.

ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚನ್ನಕೇಶವ, ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ಮತ್ತು ನ್ಯಾಷನಲ್ ಹೈಡ್ರೋಲಜಿ ಮುಖ್ಯಸ್ಥ ಡಾ. ವೆಂಕಟೇಶ್, ಡಾ. ಚಂದ್ರಮೋಹನ್ ಮತ್ತಿತರ ತಜ್ಞರ ತಂಡ ಎರಡು ದಿನಗಳ ಕಾಲ ಹಾರಂಗಿ ಮತ್ತು ಹಿನ್ನೀರು ಪ್ರದೇಶಗಳಾದ ಮಾದಾಪುರ ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದೆ.

(ಮೊದಲ ಪುಟದಿಂದ) ಹಾರಂಗಿ ನದಿಯ ನೀರಿನ ವೇಗ, ಜಲಾಶಯದ ಆಳ ಹಾಗೂ ನೀರಿನ ಸಂಗ್ರಹ, ಹಿನ್ನೀರು ವ್ಯಾಪ್ತಿಯ ಬೆಳೆಗಾರರ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದ ತಂಡ ಇದೀಗ ವರದಿಯನ್ನು ರಾಜ್ಯ ಸರ್ಕಾರದ ಮೂಲಕ ಹೈಕೋರ್ಟಿಗೆ ಸಲ್ಲಿಸಲಿದೆ. ಹಾರಂಗಿ ಜಲಾಶಯದ ಹೂಳೆತ್ತುವುದು ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ರೂ. ೧೩೦ ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿದ್ದು, ಈ ಬಗ್ಗೆ ಸ್ಥಳೀಯರು ತಕರಾರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಬಹುತೇಕ ಜಲಾಶಯಗಳು ೫೦ ವರ್ಷಗಳ ಅವಧಿ ಮೀರಿದ್ದು ಅದರ ನಿರ್ವಹಣೆ ಮತ್ತು ಅಭಿವೃದ್ಧಿ ಬಗ್ಗೆ ತಜ್ಞರ ತಂಡ ಏಳು ದಿನಗಳ ಕಾಲ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ಈ ಹಿಂದೆ ನಾಗಪುರದ ತಜ್ಞರ ತಂಡವೊAದು ಬಂದು ಸರ್ವೆ ಕಾರ್ಯ ಮುಗಿಸಿದ್ದು ನಂತರ ಸಿಂಗಾಪುರ ಹಾಗೂ ದೆಹಲಿ ಮತ್ತು ಬೆಳಗಾಂನಿAದ ಹೆಚ್ಚಿನ ತಜ್ಞರ ತಂಡ ಬಂದಿರುವುದಾಗಿ ತಿಳಿದು ಬಂದಿದೆ. ತಜ್ಞರ ತಂಡ ಮೈಸೂರಿನಲ್ಲಿ ಹಾರಂಗಿ ಯೋಜನಾ ವೃತ್ತದ ಹಾಗೂ ಕಾವೇರಿ ನೀರಾವರಿ ನಿಗಮದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಸಿದ್ಧವಾಗಿದೆ. - ಚಂದ್ರಮೋಹನ್