ಸೋಮವಾರಪೇಟೆ, ಡಿ. ೨: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕ್‌ನಲ್ಲಿ ಮದ್ಯವ್ಯಸನಿಗಳ ಹಾವಳಿ ಮಿತಿಮೀರಿದ್ದು, ರಸ್ತೆ ಬದಿಯೇ ಮೋಜು ಮಸ್ತಿಯಲ್ಲಿ ತೊಡಗುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ರಾತ್ರಿಯಾಗುತ್ತಿದ್ದAತೆ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯಸೇವನೆ ಮಾಡಿ, ಖಾಲಿ ಬಾಟಲ್‌ಗಳನ್ನು ಚರಂಡಿಗೆ ಎಸೆದು ಹೋಗುತ್ತಿರುವುದರಿಂದ ಅಶುಚಿತ್ವ ಕಂಡು ಬಂದಿದೆ.

ಇನ್ನು ಕೆಲವರು ಕುಡಿದು ಬೊಬ್ಬೆ ಹೊಡೆಯುತ್ತಾರೆ. ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ವಾತಾವರಣ ಗಬ್ಬೆದು ನಾರುತ್ತಿದೆ. ರಾತ್ರಿ ಹೊತ್ತಿನಲ್ಲಿ ಮಹಿಳೆಯರು ತಿರುಗಾಡು ವುದಕ್ಕೆ ಭಯ ಪಡುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇಲ್ಲಿನ ನಿವಾಸಿಗಳು ಪ.ಪಂ. ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ. ಅರಣ್ಯ ಇಲಾಖೆಯ ಜಾಗದ ಹಿಂಬದಿಯ ರಸ್ತೆಗೆ ದಾರಿದೀಪದ ವ್ಯವಸ್ಥೆ ಇಲ್ಲದಿರುವು ದರಿಂದ ಮದ್ಯವ್ಯ ಸನಿಗಳಿಗೆ ಸೂಕ್ತ ಜಾಗವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ವಾರ್ಡ್ ಗಳಲ್ಲಿ ಪೊಲೀಸ್ ಇಲಾಖೆಯ ಗಸ್ತು ಇಲ್ಲದಿರುವುದರಿಂದ ರಾತ್ರಿಯಾದಂತೆ ಕಿಡಿಗೇಡಿಗಳ ಹಾವಳಿ ಮಿತಿಮೀರಿದೆ. ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ರೇಂಜರ್ ಬ್ಲಾಕ್‌ನಲ್ಲಿ ಅವಶ್ಯವಿರುವ ಕಡೆ ಬೀದಿ ದೀಪ ಅಳವಡಿಸಲಾಗುವುದು. ರಾತ್ರಿ ಪೊಲೀಸ್ ಬೀಟ್‌ಗೆ ಮನವಿ ಮಾಡಿಕೊಳ್ಳಲಾಗುವುದು. ನಿವಾಸಿಗಳಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.