ಕಣಿವೆ, ಡಿ. ೧: ಅನಾರೋಗ್ಯಕ್ಕೆ ಒಳಗಾದ ಶ್ವಾನವೊಂದರ ನರಕಯಾತನೆ ಕಂಡು ಕಂಬನಿಗೈಯುತ್ತಿದ್ದ ಪಾಲಕರು ವೈದ್ಯರೊಂದಿಗೆ ಆಡುತ್ತಿದ್ದ ಮಾತುಗಳನ್ನು ಆಲಿಸಿದ ಶ್ವಾನ ಕ್ಷಣಾರ್ಧದಲ್ಲೇ ಕೊನೆಯುಸಿರೆಳೆದ ಘಟನೆ ಕುಶಾಲನಗರದ ಗಂಧದಕೋಟೆಯಲ್ಲಿ ನಡೆದಿದೆ.

ಪತ್ರಕರ್ತ ವಿನೋದ್ ತಮ್ಮ ಮನೆಯಲ್ಲಿ ಸಾಕಿದ್ದ ಸಾಕು ಶ್ವಾನದೊಂದಿಗೆ ಕಳೆದ ಹಲವು ವರ್ಷಗಳಿಂದ ಬಂದು ಸೇರಿಕೊಂಡಿದ್ದ ಬೀದಿ ಬದಿಯ ಹೆಣ್ಣು ಶ್ವಾನವೊಂದರ ದುರಂತ ಕಥೆ ಇದು.

ಕಪ್ಪು ಬಣ್ಣದ ಈ ಶ್ವಾನಕ್ಕೆ ಪಾಲಕರಿಟ್ಟ ಹೆಸರು ಕರ್ಮಿ. ಕಳೆದ ಐದಾರು ವರ್ಷಗಳಿಂದ ಮನೆಯ ಸದಸ್ಯನಂತಿದ್ದ ಈ ಕರ್ಮಿಯ ಸ್ತನಗಳ ಜಾಗದಲ್ಲಿ ಗಾಯವೊಂದು ಹುಣ್ಣಾಗಿ ಮಾರ್ಪಟ್ಟಿತ್ತು. ಅದು ಬೃಹದಾಕಾರವಾಗುತ್ತಿದ್ದಂತೆಯೇ ಭಾರೀ ತ್ರಾಸ ಉಂಟಾಗಿ ನರಳುತ್ತಿದ್ದ ಈ ಶ್ವಾನಕ್ಕೆ ವೈದ್ಯರ ಉಪಚಾರ ಕೈಮೀರಿ ಹೋಗಿತ್ತು. ಬಳಿಕ ತಡೆಯಲಾರದ ನೋವಿನೊಂದಿಗೆ ತಾನೊಂದೇ ಘೀಳಿಡುತ್ತಿದ್ದುದನ್ನು ನೋಡಲಾಗದ ಪಾಲಕ ವಿನೋದ್, ತಮಗೆ ಪರಿಚಯವಿದ್ದ ಬೈಲಕೊಪ್ಪದ ಶ್ವಾನ ಚಿಕಿತ್ಸಕರೊಬ್ಬರಿಗೆ ಕರೆ ಮಾಡಿ, ಕರ್ಮಿ ಅನುಭವಿಸುತ್ತಿದ್ದ ನರಕಯಾತನೆಯನ್ನು ವಿವರಿಸಿದ್ದಾರೆ.

ಉಪಚಾರಕ್ಕೆ ಮೀರಿದ ಅನಾರೋಗ್ಯವಿರುವ ಕಾರಣ ಅದನ್ನು ಗುಣಪಡಿಸಲು ಅಸಾಧ್ಯ. ಹಾಗಾಗಿ ಅದು ನರಳುವುದನ್ನು ತಪ್ಪಿಸಲಾಗದು. ಆದರೂ ಕೊನೆಯ ಪ್ರಯತ್ನವಾಗಿ ಏನಾದರೂ ಮಾಡಬಹುದಾ ನೋಡೋಣ ಬರುತ್ತೇನೆ. ಅದನ್ನು ಮನೆಯಿಂದ ಬೇರೆಡೆಗೆ ಇಟ್ಟು ವ್ಯವಸ್ಥೆ ಮಾಡಿ ಎಂದು ಪಾಲಕ ವಿನೋದ್‌ಗೆ ಬೈಲಕೊಪ್ಪದ ಶ್ವಾನ ಚಿಕಿತ್ಸಕ ಹೇಳಿದ್ದಾರೆ. ಈ ಇಬ್ಬರ ಸಂಭಾಷಣೆಯನ್ನು ಆಲಿಸಿದ ಆ ಶ್ವಾನಕ್ಕೆ ತಾನು ಇನ್ನು ಉಳಿಯುವುದಿಲ್ಲ ಎಂದು ಅರಿವಾಯಿತೋ ಏನೋ... ಕ್ಷಣಾರ್ಧದಲ್ಲಿ ಮನೆಯೊಳಗಿನ ತಾನಿದ್ದ ಜಾಗದಿಂದ ಮನೆಯ ಹಿಂಬದಿಯ ಅನತಿ ದೂರಕ್ಕೆ ತೆರಳಿದ ಶ್ವಾನ ಒದ್ದಾಡಿ ಒದ್ದಾಡಿ ಪಾಲಕರೆದುರೇ ಕಣ್ಮುಚ್ಚಿತು. ಇದರಿಂದ ಪಾಲಕರ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿತು. ನೋವಿನ ನಡುವೆಯೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿದ ವಿನೋದ್, ಅನಾಥವಾಗಿ, ರೋಗಗ್ರಸ್ತವಾಗಿ ಆಹಾರವಿಲ್ಲದೇ ಪರಿತಪಿಸುವ ಶ್ವಾನಗಳಿಗೆ ಸೂಕ್ತ ಆಹಾರ ಹಾಗೂ ಉಪಚಾರ ನೀಡಲು ಕೊಡಗಿನಲ್ಲಿ ಪ್ರಾಣಿಪ್ರಿಯರ ವೇದಿಕೆಯೊಂದರ ಅಗತ್ಯವಿದೆ ಎಂದು ಹೇಳಿದರು. -ಮೂರ್ತಿ