ಕೊಡಗು ಜಿಲ್ಲೆಯಲ್ಲಿ ಬಹುತೇಕ ಕೌಟುಂಬಿಕ ಆಸ್ತಿಯು ಇನ್ನೂ ಜಂಟಿ ಖಾತೆಯಲ್ಲಿಯೇ ಮುಂದುವರಿಯುತ್ತಿವೆ. ಇನ್ನೂ “ಒಂಟಿ ಖಾತೆಗೆ” ಬದಲಾಗಿಲ್ಲ. ಈ ಪ್ರಕ್ರಿಯೆಗಾಗಿ ಬಹುತೇಕ ಸಣ್ಣ-ಅತೀ ಸಣ್ಣ ಭೂ ಹಿಡುವಳಿದಾರರು ಕಂದಾಯ ಇಲಾಖಾ ಕಚೇರಿಗಳಿಗೆ ಪ್ರತೀ ದಿನವೂ ಅಲೆಯುತ್ತಿದ್ದಾರೆ. ೯ನೇ ಕಾಲಂನಲ್ಲಿ ಭೂ ಹಿಡುವಳಿದಾರನ ಹೆಸರು ಮಾತ್ರ ಇರಬೇಕು. ಆದರೆ, ಅಲ್ಲಿ ಇಡೀ ಕುಟುಂಬದವರ ಹೆಸರಿದೆ. ಬೆಳೆಯ ಕಾಲಂ ಮತ್ತು ಕಂದಾಯ ಕಾಲಂ ಬಹುಪಾಲು ಖಾಲಿ ಬಿದ್ದಿದೆ. ಆದರೂ, ಪಹಣಿ ಪ್ರತಿಗೆ ನಾವು ಸರಕಾರಕ್ಕೆ ಹಣ ಪಾವತಿಸಲೇಬೇಕು ! ಇದನ್ನು ಸರಿಪಡಿಸಲು ಮಾಡುವ ಅಲೆದಾಟದಿಂದಾಗಿ ಹಲವರ ಆಯುಷ್ಯವೇ ಮುಗಿದು ಹೋಗಿದೆ. ಇದರಿಂದ ಅವರ ಅಮೂಲ್ಯ ಸಮಯ-ಹಣ ವ್ಯರ್ಥವಾಗುತ್ತಿದೆ. ಆದರೂ, ಅವರಿಗೆ ಸಮರ್ಪಕ ಭೂ ದಾಖಲೆಗಳು ಲಭ್ಯವಾಗುತ್ತಿಲ್ಲ. ಹಲವರ ಜಮೀನಿಗೆ ಇನ್ನೂ ನಕ್ಷೆಗಳು ಲಭ್ಯವಾಗಿಲ್ಲ. ಕೆಲವರಿಗೆ ತಮ್ಮ ಜಮೀನುಗಳ ಮೋಜಣಿ ಸಂಖ್ಯೆ (ಸರ್ವೆ ನಂಬರ್) ತಿಳಿದಿಲ್ಲ. ಪರಿಣಾಮ ಅವರು ಆರ್ಥಿಕವಾಗಿ ಸಬಲರಾಗಲು ಹಿನ್ನೆಡೆಯಾಗುತ್ತಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಜನ ನೊಂದುಕೊAಡಿದ್ದಾರೆ.
ಬ್ರಿಟಿಷರ ಕಾಲದ ಮೋಜಣಿ
ಬ್ರಿಟಿಷರ ಕಾಲದಲ್ಲಿ ಭಾರತ ದೇಶದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮೋಜಣಿ (ಸರ್ವೆ) ಮಾಡಿಸಲಾಗಿತ್ತು. ನಿಗದಿತ ಗಡಿ ಗುರುತಿಸಿ, ಅವಶ್ಯವಿರುವ ಕಡೆ ಭೂಮಿ ಮೇಲೆ ಮತ್ತು ಸುಮಾರು ೨-೩ ಅಡಿಗಳ ಆಳದಲ್ಲಿ ಕಲ್ಲುಗಳನ್ನು ನೆಡಲಾಗಿತ್ತು. ಅದಕ್ಕೆ ತಕ್ಕ ಅತ್ಯಂತ ಸುಸಜ್ಜಿತವಾದ ನಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ಇದರ ಆಧಾರದಲ್ಲಿಯೇ ಇಂದು ನಮ್ಮ ದೇಶದಲ್ಲಿ ಮೋಜಣಿ ನಡೆಯುತ್ತಿದೆ. ಆದರೂ, ನಮ್ಮ ಭೂಮಿಯನ್ನು ಅಳೆದು ಅದಕ್ಕೆ ಕಂದಾಯ ನಿಗದಿ ಮಾಡಲು ಇಂದಿನ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಶ್ರೀಸಾಮಾನ್ಯರಿಗೆ ಭೂ ನಕ್ಷೆಗಳು ಸಕಾಲಿಕವಾಗಿ ಲಭ್ಯವಾಗುತ್ತಿಲ್ಲ. ಜೊತೆಗೆ ಭೂ ಅಭಿವೃದ್ಧಿ ಮತ್ತು ಆರ್ಥಿಕಾಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದೆ. ಕೃಷಿ ಆಶ್ರಿತರು ಸರಕಾರದ ಸಹಾಯ-ಸವಲತ್ತುಗಳಿಂದ ವಂಚಿತರಾಗುತ್ತಿದ್ಧಾರೆ.
೧೯೬೫ರ ಕಂದಾಯ ಕಾನೂನು ಜಾರಿ
ಈ ವಿಚಾರಗಳು ನಮ್ಮ ಅಧಿಕಾರಿ-ಆಡಳಿತ ವರ್ಗಕ್ಕೆ ತಿಳಿಯದ ವಿಚಾರವೇನಲ್ಲ. ಕಂದಾಯ ಇಲಾಖೆಯ ಅಸಡ್ಡೆಯ ಪರಿಣಾಮ ಸರಕಾರಕ್ಕೆ ಪುರಾತನ ಕಾಲದಲ್ಲಿ ನಿಗದಿಯಾದ ಕನಿಷ್ಟ ಕಂದಾಯ ಮಾತ್ರ ಪಾವತಿಯಾಗುತ್ತಿದೆ. ಅದನ್ನು ಇಂದಿನ ಕಾಲಘಟ್ಟಕ್ಕೆ ಸರಿಹೊಂದುವAತೆ ಪರಿಷ್ಕರಣೆ ಮಾಡುವ ಅಗತ್ಯವಿದೆ. ಪೆಟ್ರೋಲ್, ಡೀಸೆಲ್ಗಳಿಗೆ ಪ್ರತೀ ದಿನವೂ ದರ ಪರಿಷ್ಕರಣೆ ಮಾಡಿ, ಗ್ರಾಹಕರಿಗೆ ಬರೆ ಹಾಕುವುದರ ಬದಲು ಈ ಕಾರ್ಯ ಅತೀ ಜರೂರತ್ತಿದೆ. ಇಂತಹ ಗಂಭೀರ ವಿಚಾರವನ್ನು ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಚರ್ಚಿಸಬೇಕಿದೆ. ತನ್ಮೂಲಕ ಕೊಡಗು ಜಿಲ್ಲೆಯಲ್ಲಿರುವ ಖಾಸಗಿ ಮತ್ತು ಸರಕಾರಿ ಜಮೀನುಗಳ ವರ್ಗೀಕರಣ ಮಾಡಬೇಕಿದೆ. ಇವುಗಳ ಜತೆಗೆ ಕರ್ನಾಟಕದ ಭೂ ಕಂದಾಯ ಅಧಿನಿಯಮ - ೧೯೬೫ನ್ನು ಇಡೀ ಕರ್ನಾಟಕಕ್ಕೆ ಅನ್ವಯವಾಗಿರುವಂತೆ, ಕೊಡಗಿನಲ್ಲಿಯೂ ಯಥಾವತ್ ಅನುಷ್ಠಾನಕ್ಕೆ ತರಬೇಕಿದೆ. ಆ ಮೂಲಕ ಕೊಡಗಿನ ಕಂದಾಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಿದೆ.
ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಿ
ಜಿಲ್ಲೆಯ ಜನತೆ ಅನುಭವಿ ರಾಜಕಾರಣಿಗಳನ್ನು, ಹಿರಿಯ ಮುತ್ಸದಿಗಳನ್ನು ಸದನಗಳಿಗೆ ಆರಿಸಿ ಕಳುಹಿಸಿದೆ. ಅವರು ತಮ್ಮ ಜವಾಬ್ದಾರಿಗಳನ್ನು ಅರಿತು ಶೀಘ್ರವೇ ಕಾರ್ಯಪ್ರವೃತ್ತರಾಗಬೇಕಿದೆ. ಹಿರಿಯ ಶಾಸಕರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದಲ್ಲಿ ಈ ಕಾರ್ಯ “ಕನ್ನಡಿಯೊಳಗಿನ ಗಂಟೇ”ನೂ ಅಲ್ಲ. ಪಾದತಲದಲ್ಲಿ ದೊರೆಯುವ ಸಣ್ಣ-ಪುಟ್ಟ ಮಾಹಿತಿಯನ್ನು ಸದನದಿಂದ ಪಡೆಯುವ ಮೂಲಕ “ಅಮೂಲ್ಯ ಸಮಯ” ಪೋಲು ಮಾಡುವ ಬದಲು ಇಂತಹ ಕಾರ್ಯಕ್ಕೆ ಮುಂದಾಗಿ ತಮ್ಮ ಚಾಕಚಕ್ಯತೆ ಪ್ರದರ್ಶಿಸಿ, ಔನ್ಯತೆ ಮೆರೆಯವತ್ತ ಚಿಂತನ-ಮAಥನ ನಡೆಸಬೇಕಿದೆ. ಹಾಗಾದಲ್ಲಿ ಮಾತ್ರ ಕೊಡಗಿನ ಸಣ್ಣ ಮತ್ತು ಅತೀ ಸಣ್ಣ ಭೂ ಹಿಡುವಳಿದಾರರು ನೆಮ್ಮದಿಯ ಜೀವನ ನಡೆಸುವುದು ಸಾಧ್ಯ.
- ಕೂಡಂಡ ರವಿ, ಹೊದ್ದೂರು