(ವರದಿ: ಚಂದ್ರಮೋಹನ್)
ಕುಶಾಲನಗರ, ಡಿ. ೧: ಸರಕಾರದ ನಿರ್ದೇಶನದಂತೆ ದುಬಾರೆ ಸಾಕಾನೆ ಶಿಬಿರದಿಂದ ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸಿದ ಕುಶ ಸಾಕಾನೆ ಇದೀಗ ಮರಳಿ ದುಬಾರೆ ಸಮೀಪದ ಮಾಲ್ದಾರೆ ಅರಣ್ಯದತ್ತ ಹಿಂತಿರುಗಿ ಬರುತ್ತಿರುವ ಸುಳಿವು ಲಭಿಸಿದೆ.
ವನ್ಯಜೀವಿ ಪ್ರೇಮಿಗಳ ಕೋರಿಕೆಯಂತೆ ಸರ್ಕಾರ ಕುಶ ಆನೆಯನ್ನು ಅರಣ್ಯ ಇಲಾಖೆ ಮೂಲಕ ರೇಡಿಯೋ ಕಾಲರ್ ಅಳವಡಿಸಿ ೨೦೨೧ ಜೂನ್ ತಿಂಗಳಲ್ಲಿ ಬಂಡೀಪುರ ರಕ್ಷಿತಾರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಸಿತ್ತು.
೨೦೧೬ರಲ್ಲಿ ಚೆಟ್ಟಳ್ಳಿ ವ್ಯಾಪ್ತಿಯ ಅರಣ್ಯದಿಂದ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ನಡೆಸಿ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ಕೃಷಿ ಚಟುವಟಿಕೆಗೆ ಹಾನಿ ಮಾಡುತ್ತಿದ್ದ ಎರಡು ಆನೆಗಳನ್ನು ಹಿಡಿದು ಶಿಬಿರಕ್ಕೆ ತರಲಾಗಿ ಪಳಗಿಸಿದ ನಂತರ ಲವ-ಕುಶ ಎಂಬ ಹೆಸರಿನಲ್ಲಿ ದುಬಾರೆ ಸಾಕಾನೆ ಶಿಬಿರ ಸೇರಿತ್ತು.
ದುಬಾರೆ ಶಿಬಿರದಿಂದ ಕುಶ ಆನೆ ಮಾತ್ರ ೨೦೧೭ರ ನವೆಂಬರ್ ತಿಂಗಳಲ್ಲಿ ರಾತ್ರೋರಾತ್ರಿ ತಪ್ಪಿಸಿಕೊಂಡು ಎರಡು ವರ್ಷಗಳ ಕಾಲ ನಾಪತ್ತೆಯಾಗಿತ್ತು. ನಂತರ ದುಬಾರೆ ಶಿಬಿರದ ಅಧಿಕಾರಿಗಳ ನೇತೃತ್ವದಲ್ಲಿ ಹಲವು ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ನಾಪತ್ತೆಯಾಗಿದ್ದ ಕುಶ ಆನೆಯನ್ನು ಮರಳಿ ಶಿಬಿರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ನಂತರದ ದಿನಗಳಲ್ಲಿ ವನ್ಯಜೀವಿ ಪ್ರೇಮಿ ಮನೇಕಾ ಗಾಂಧಿ ನೇತೃತ್ವದ ತಂಡದ ಆಗ್ರಹದಂತೆ ಸರ್ಕಾರದ ಸೂಚನೆ ಅನ್ವಯ ಅರಣ್ಯ ಇಲಾಖೆ ಕುಶನನ್ನು ಅದರ ಇಚ್ಚೆಗೆ ವಿರುದ್ಧವಾಗಿ ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಸಿತ್ತು. ಆದರೆ ಬಂಡೀಪುರದಲ್ಲಿ ನೆಲೆ ಕಾಣಲು ಇಷ್ಟವಿಲ್ಲದ ಕುಶ ದಿನನಿತ್ಯ ಬಂಡೀಪುರದ
(ಮೊದಲ ಪುಟದಿಂದ) ಅರಣ್ಯದಲ್ಲಿ ಕಣ್ಣೀರು ಸುರಿಸುತ್ತಿದ್ದ ಮಾಹಿತಿ ಕೂಡ ಕೇಳಿಬಂದಿದ್ದವು. ಇದೀಗ ಕುಶ ಬಂಡೀಪುರ ರಕ್ಷಿತಾರಣ್ಯ ಬಿಟ್ಟು ನಾಗರಹೊಳೆ ರಾಷ್ಟಿçÃಯ ಅಭಯಾರಣ್ಯದತ್ತ ತಲುಪಿರುವ ಮಾಹಿತಿಗಳು ಲಭಿಸುತ್ತಿದೆ. ಆರು ತಿಂಗಳ ಅವಧಿಯಲ್ಲಿ ೧೮೦ ರಿಂದ ೨೦೦ ಕಿಲೋಮೀಟರ್ ದೂರದ ತನಕ ಸಾಗಿರುವ ಬಗ್ಗೆ ಖಚಿತ ಸುಳಿವು ‘ಶಕ್ತಿ’ಗೆ ಲಭಿಸಿದೆ.
ಬಂಡೀಪುರದಿAದ ಬಂದ ಕುಶ ಆನೆ ಕೇರಳ ಗಡಿ ಮೂಲಕ ತೊಲ್ಪಟ್ಟಿ ಅರಣ್ಯ ಮಾರ್ಗವಾಗಿ ಇದೀಗ ನಾಗರಹೊಳೆಯ ಅಭಯಾರಣ್ಯಕ್ಕೆ ತಲುಪಿರುವ ಕುರಿತು ಮೂಲಗಳಿಂದ ಗೊತ್ತಾಗಿದೆ. ಕುಶ ಕೊಡಗು ಜಿಲ್ಲೆಯ ತಿತಿಮತಿ ಕಡೆಗೆ ಬರುತ್ತಿರುವ ಸುಳಿವು ದೊರೆತಿದ್ದು ನಂತರ ಮಾಲ್ದಾರೆ ರಕ್ಷಿತಾರಣ್ಯ ಮೂಲಕ ದುಬಾರೆ ವ್ಯಾಪ್ತಿಗೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಕೆಲವು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ.
ದುಬಾರೆ ಸಾಕಾನೆ ಶಿಬಿರದಲ್ಲಿ ಇರುವ ತನ್ನ ಸಂಗಡಿಗರ ಮೋಹ ಹಾಗೂ ಸಹೋದರ ಲವ ನೊಂದಿಗೆ ಸೇರಿಕೊಳ್ಳುವುದು ಜೊತೆಗೆ ದುಬಾರೆ ಶಿಬಿರದಲ್ಲಿ ನಿತ್ಯ ನೀಡುತ್ತಿದ್ದ ಉಪಚಾರಕ್ಕೆ ಕುಶ ಮಾರು ಹೋಗಿರುವುದು ಮತ್ತೆ ಶಿಬಿರಕ್ಕೆ ಹಿಂತಿರುಗಲು ಕಾರಣ ಎನ್ನುತ್ತಾರೆ ಕುಶನನ್ನು ಕೆಲವು ವರ್ಷಗಳ ಕಾಲ ಆರೈಕೆ ಮಾಡಿದ ಸಿಬ್ಬಂದಿಗಳು.
ಇಚ್ಚೆಗೆ ವಿರುದ್ಧವಾಗಿ ಸ್ಥಳಾಂತರಗೊAಡ ಕುಶ ಮತ್ತೆ ದುಬಾರೆ ಸಾಕಾನೆ ಶಿಬಿರಕ್ಕೆ ಕ್ಷೇಮವಾಗಿ ತಲುಪಲಿ ಎನ್ನುವುದೇ ಇವರ ಆಶಯವಾಗಿದೆ.