*ಗೋಣಿಕೊಪ್ಪ, ಡಿ. ೧: ಲಯನ್ಸ್ ಕ್ಲಬ್ ವಲಯ ಸಮ್ಮೇಳನ ತಾ. ೫ ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ವಲಯ ಸಮ್ಮೇಳನ ಅಧ್ಯಕ್ಷ ಪಾರುವಂಗಡ ಎನ್. ಪೆಮ್ಮಯ್ಯ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ೧೧ ಕ್ಲಬ್‌ಗಳ ಭಾಗವಹಿಸುವಿಕೆಯಲ್ಲಿ ಅಂದು ಸಂಜೆ ೫ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ವಲಯ ಮುಖ್ಯಸ್ಥರು, ವಲಯ ಸಲಹೆಗಾರರು, ವಲಯ ಕ್ಲಬ್‌ಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕ್ಲಬ್‌ಗಳ ಬ್ಯಾನರ್ ಪ್ರದರ್ಶನ, ಚಟುವಟಿಕೆಗಳ ಬಗ್ಗೆ ಚರ್ಚೆ, ಸಾರ್ವಜನಿಕವಾಗಿ ಸಾಧನೆ ಮಾಡುತ್ತಿರುವವರನ್ನು ಸನ್ಮಾನದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಲೋಪಮುದ್ರ ಮೆಡಿಕಲ್ ಸೆಂಟರ್ ಮುಖ್ಯ ವೈದ್ಯರಾದ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ, ಪರಿಸರ ಪ್ರೇಮಿ ಕರ್ನಲ್ (ನಿವೃತ್ತ) ಚೆಪ್ಪುಡೀರ ಪಿ. ಮುತ್ತಣ್ಣ, ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ನೀಡುತ್ತಿರುವ ಮಾರ್ಚಂಡ ಗಣೇಶ್ ಅವರುಗಳನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಅದಾನಿ ಗ್ರೂಪ್ ಕಾನೂನು ಸಲಹೆಗಾರ ಪುಗ್ಗೇರ ದೇವಯ್ಯ, ವಲಯದ ಪ್ರಥಮ ಮಹಿಳೆ ಜ್ಯೋತಿ ಉತ್ತಯ್ಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಲಯನ್ಸ್ ರೀಜನ್ ಮುಖ್ಯಸ್ಥ ಧನು ಉತ್ತಯ್ಯ, ಸಮ್ಮೇಳನ ಖಜಾಂಜಿ ಸಚಿನ್ ಬೆಳ್ಯಪ್ಪ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಪಾರುವಂಗಡ ಜೀವನ್, ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ ಇದ್ದರು.