ಸೋಮವಾರಪೇಟೆ, ನ. ೩೦: ಅಕಾಲಿಕ ಮಳೆಯಿಂದಾಗಿ ತಾಲೂಕಿನಾದ್ಯಂತ ಕಾಫಿ, ಕರಿಮೆಣಸು, ಮುಸುಕಿನ ಜೋಳ, ಶುಂಠಿ, ಬಾಳೆ, ಅಡಿಕೆ, ಭತ್ತ ಫಸಲು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೃಷಿಕ ವರ್ಗ ಪರಿಹಾರಕ್ಕೆ ಎದುರು ನೋಡುತ್ತಿದೆ. ಈ ಮಧ್ಯೆ ಸರ್ಕಾರವೂ ಸಹ ರೈತರಿಂದ ಬೆಳೆ ಪರಿಹಾರಕ್ಕೆ ಅರ್ಜಿ ಸ್ವೀಕರಿಸಿದ್ದು, ರೈತರು ಅರ್ಜಿ ಸಲ್ಲಿಸುವ ಸಂದರ್ಭ ಹಿಂದಿನ ಕಂದಾಯ ಬಾಕಿಯನ್ನು ಕಟ್ಟಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ವ್ಯಕ್ತಗೊಂಡಿದ್ದು, ಕೃಷಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲೇ ಅಕಾಲಿಕ ಮಳೆಯಿಂದ ಕಂಗೆಟ್ಟಿರುವ ರೈತಾಪಿ ವರ್ಗ ಸರ್ಕಾರದ ಎದುರು ಪರಿಹಾರದ ಬೇಡಿಕೆ ಇಟ್ಟಿದ್ದು, ಇಂತಹ ಸಂದಿಗ್ಧತೆಯ ಸನ್ನಿವೇಶದಲ್ಲಿ ಕಂದಾಯ ಇಲಾಖೆಯ ಕೆಲ ಸಿಬ್ಬಂದಿಗಳು, ರೈತರಿಂದ ಕಂದಾಯ ಬಾಕಿಯನ್ನು ವಸೂಲಾತಿ ಮಾಡುವ ಮೂಲಕ ಇನ್ನಷ್ಟು ತೊಂದರೆ ನೀಡಲು ಮುಂದಾಗಿದ್ದಾರೆ.

ಈಗಾಗಲೇ ಸೋಮವಾರಪೇಟೆ ತಾಲೂಕಿನ ಹೋಬಳಿಗಳಲ್ಲಿರುವ ನಾಡ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಪರಿಹಾರದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸ್ವತಃ ರಾಜ್ಯದ ಕಂದಾಯ ಸಚಿವರೇ ಜಿಲ್ಲೆಗೆ ಭೇಟಿ ನೀಡಿ ಅಕಾಳಿಕ ಮಳೆಯಿಂದ ಹಾನಿಗೀಡಾದ ಫಸಲು ನಷ್ಟವನ್ನು ಪರಿಶೀಲಿಸಿದ್ದು, ಸರ್ಕಾರದಿಂದ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಸಚಿವರು, ಅಕಾಲಿಕ ಮಳೆಗೆ ಕೃಷಿ ಫಸಲು ಹಾನಿಗೀಡಾದ ಪ್ರದೇಶಗಳಿಗೆ ಖುದ್ದು ತೆರಳಿ ವಾಸ್ತವಾಂಶದ ಬಗ್ಗೆ ಮರು ಸಮೀಕ್ಷೆ ನಡೆಸಬೇಕು. ಅಲ್ಲಿನ ರೈತರಿಂದ ಅರ್ಜಿ ಸ್ವೀಕರಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಸಂಬAಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಆದಾಗ್ಯೂ ಸಹ ರೈತರಿಂದ ಪರಿಹಾರಕ್ಕೆ ಅರ್ಜಿ ಸ್ವೀಕರಿಸುವ ಸಂದರ್ಭ ಹಿಂದಿನ ಕಂದಾಯ ಬಾಕಿಯನ್ನು ಪಾವತಿಸಿಕೊಳ್ಳಲಾಗುತ್ತಿದೆ. ಬೆಳೆ ಪರಿಹಾರ ಅರ್ಜಿ ಸ್ವೀಕಾರಕ್ಕೆ ಕಂದಾಯ ಪಾವತಿಯನ್ನು ಸರ್ಕಾರದ ಕಡ್ಡಾಯಗೊಳಿಸಿಲ್ಲವಾದರೂ, ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಇಂತಹ ಕ್ರಮಕ್ಕೆ ಮುಂದಾಗಿರುವುದು ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯ ನೂರಾರು ಮಂದಿ ರೈತರು ಇಲ್ಲಿನ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಲು ತೆರಳಿದ ಸಂದರ್ಭ, ಕೆಲ ಸಿಬ್ಬಂದಿಗಳು ಕಂದಾಯ ವಸೂಲಿಗೆ ಇಳಿದಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ-ಶಿವರಾಮೇಗೌಡ ಬಣದ ಅಧ್ಯಕ್ಷ ಫ್ರಾನ್ಸಿನ್ ಡಿಸೋಜ ಸೇರಿದಂತೆ ರೈತರು ಪ್ರಶ್ನಿಸಿದ್ದು, ಸರ್ಕಾರದ ಆದೇಶವಿಲ್ಲದಿದ್ದರೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕಂದಾಯ ವಸೂಲಾತಿ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿಗದಿಪಡಿಸಿರುವ ದಾಖಲಾತಿಗಳನ್ನು ಪಡೆದು ರೈತರಿಂದ ಬೆಳೆ ಪರಿಹಾರದ ಅರ್ಜಿ ಸ್ವೀಕರಿಸಬೇಕು. ಯಾವುದೇ ಕಾರಣಕ್ಕೂ ಕಂದಾಯ ವಸೂಲಾತಿಯನ್ನು ಈ ಸಂದರ್ಭ ಮಾಡಬಾರದು ಎಂದು ಫ್ರಾನ್ಸಿಸ್ ಸೇರಿದಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕೆಗೆ ಪ್ರಕಟಣೆ ನೀಡಿರುವ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು, ಬೆಳೆ ಹಾನಿಗೆ ಸಂಬAಧಿಸಿದAತೆ ರೈತರಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಇಲಾಖೆಯು ರೈತರಿಂದ ಯಾವುದೇ ಕಂದಾಯವನ್ನೂ ಕೇಳುತ್ತಿಲ್ಲ. ಕಂದಾಯ ಬಾಕಿ ಇರುವ ರೈತರು ಕಂದಾಯ ನೀಡಿದರೆ ಮಾತ್ರ ಸ್ವೀಕರಿಸಲಾಗುತ್ತಿದೆ. ಪರಿಹಾರದ ಅರ್ಜಿ ಸ್ವೀಕರಿಸಲು ಕಂದಾಯ ಪಾವತಿಯನ್ನು ಕಡ್ಡಾಯಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.