ಗೋಣಿಕೊಪ್ಪಲು, ನ. ೩೦: ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿಕೌಶಲ್ಯ ಮಾರ್ಗದರ್ಶನ ಕುರಿತು ಕಾಲೇಜಿನ ಹಳೆಯ ವಿದ್ಯಾರ್ಥಿ ಅತುಲ್ ಟಿ. ಅವರಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಅತುಲ್ ಟಿ. ಅವರು ಜೆ.ಇ.ಇ. ಪರೀಕ್ಷೆಯಲ್ಲಿ ಅಗ್ರಸ್ಥಾನದೊಂದಿಗೆ ತೇರ್ಗಡೆಹೊಂದಿ ಮುಂಬೈನ ಐ.ಐ.ಟಿ. ಸಾರ್ವಜನಿಕ ತಾಂತ್ರಿಕ ಮತ್ತು ಸಂಶೋಧನಾ ವಿಶ್ವವಿದ್ಯಾನಿಲಯದಲ್ಲಿ ಏರೋಸ್ಪೇಸ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ನಗರ ಪ್ರದೇಶಗಳ ವಿದ್ಯಾರ್ಥಿಗಳಂತೆಯೇ ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮುಂತಾದ ವೃತ್ತಿಪರ ಶಿಕ್ಷಣವನ್ನು ಪಡೆಯಲು ಯೋಗ್ಯರಾಗಿರುತ್ತಾರೆ. ಸತತ ಪರಿಶ್ರಮ, ಶ್ರದ್ಧೆ, ಆಸಕ್ತಿಗಳಿಂದ ಓದಿನಲ್ಲಿ ತೊಡಗಿಸಿಕೊಂಡರೆ ಫಲ ಲಭಿಸುತ್ತದೆ. ಇಂದಿನ ಪ್ರಪಂಚದಲ್ಲಿ ಅವಕಾಶಗಳು ವಿಫುಲವಾಗಿವೆ. ವಿದ್ಯಾರ್ಥಿಗಳು ಗ್ರಂಥಾಲಯ, ಅಂತರ್ಜಾಲ, ದಿನಪತ್ರಿಕೆ, ಮಾಸಿಕ ಪತ್ರಿಕೆಗಳನ್ನು ಓದುವುದರ ಮೂಲಕ ತಮ್ಮ ಜ್ಞಾನಾರ್ಜನೆಯನ್ನು ವೃದ್ಧಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಮರ್ಥರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳಾದ ನಂದನ, ಕಾವೇರಿ, ಶೃಂಗ ಪ್ರಾರ್ಥಿಸಿದರು. ಲಿವಿತ್ ಮುತ್ತಣ್ಣ ಸ್ವಾಗತಿದರೆ, ಅಂಜಲಿ ವಂದಿಸಿದರು. ನಿಹಾರ್ ಫಾತಿಮಾ ಮತ್ತು ಅಕ್ಷಯ ನಿರೂಪಿಸಿದರು.