ವೀರಾಜಪೇಟೆ, ನ. ೩೦: ಹುತ್ತರಿ ಪ್ರಯುಕ್ತ ಪಟಾಕಿ ಅಂಗಡಿ ಮಳಿಗೆಗಳಿಂದ ಬಂದ ಲಾಭಾಂಶದಿAದ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ವೀರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಪಟಾಕಿ ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಮಳಿಗೆಗಳ ಮೂರು ದಿನಗಳ ಕಾಲ ಮಾರಾಟವಾದ ಪಟಾಕಿಗಳಿಂದ ಬಂದ ಲಾಭಾಂಶವನ್ನು ಉತ್ತಮ ಕಾರ್ಯಕ್ಕೆ ವಿನಿಯೋಗ ಮಾಡಬೇಕು ಎಂಬುದು ಪಟಾಕಿ ವರ್ತಕರ ನಿರ್ಧಾರವಾಗಿತ್ತು. ಅದರಂತೆ ಇಂದು ವೀರಾಜಪೇಟೆ ನಗರದ ಚಿಕ್ಕಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು ೧೦೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟು ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ವರ್ತಕ ಮಂಜುನಾಥ್ ಅವರು, ಹುತ್ತರಿ ಹಬ್ಬದ ಪ್ರಯುಕ್ತ ಪಟಾಕಿ ಮಳಿಗೆಗಳನ್ನು ತೆರಯಲಾಗಿತ್ತು. ಮಳಿಗೆಗಳಲ್ಲಿ ಬಂದ ಲಾಭಾಂಶವನ್ನು ಸೇವಾ ಕಾರ್ಯಕ್ಕೆ ವಿನಿಯೋಗ ಮಾಡುವ ಉದ್ದೇಶವಾಗಿತ್ತು. ಕೊರೊನಾ ಸಂದರ್ಭ ಆರ್ಥಿಕ ಸಮಸ್ಯೆ ಎದುರಾಗಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸಹ ಶಿಕ್ಷಕಿ ನೀತಾ ಕುಮಾರಿ ಮತ್ತು ಪಟಾಕಿ ವರ್ತಕರಾದ ಹರ್ಷ, ರಚನ್, ರಜಾಕ್, ಜಾನ್ಸ್ನ್, ವಿವೇಕ್, ಉಮೇಶ್, ಸುಮೇಶ್ ಮತ್ತು ಹರ್ಷಿತ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.