ಮಡಿಕೇರಿ, ನ. ೨೯: ಕೊಡಗು ಪ್ರೆಸ್ ಕ್ಲಬ್ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ ೨ ನಲ್ಲಿ ಚಾಂಪಿಯನ್ ತಂಡವಾಗಿ ಮೀಡಿಯಾ ಕ್ಯಾಪ್ಟನ್ ೧೨ ತಂಡ ಹೊರಹೊಮ್ಮಿದೆ. ಪುತ್ತಂ ಪ್ರದೀಪ್ ಮಾಲೀಕತ್ವದ ತಂಡವನ್ನು ಹಿರಿಯ ಅನುಭವಿ ಆಟಗಾರ ಎ.ಎಸ್. ಮುಸ್ತಫಾ ಮುನ್ನಡೆಸಿದ್ದರು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಪತ್ರಕರ್ತರ ಕ್ರಿಕೆಟ್ ಹಬ್ಬ ನಡೆಯಿತು. ಅಂತಿಮ ಪಂದ್ಯದಲ್ಲಿ ನವೀನ್ ಡಿಸೋಜ ಮಾಲೀಕತ್ವದ, ಆದರ್ಶ್ ಅದ್ಕಲೇಗಾರ್ ನಾಯಕತ್ವದ ಕೊಡಗು ಲೈವ್ ೨೪ ಈಗಲ್ಸ್ ತಂಡವನ್ನು ಸೋಲಿಸುವುದರ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರು.

(ಮೊದಲ ಪುಟದಿಂದ) ಮಂದ ಬೆಳಕಿನಿಂದ ೨ ಓವರ್‌ಗೆ ಸೀಮಿತವಾದ ಅಂತಿಮ ಪಂದ್ಯದಲ್ಲಿ ಕೊಡಗು ಲೈವ್ ತಂಡ ೩ ವಿಕೆಟ್ ನಷ್ಟಕ್ಕೆ ೬ ರನ್ ದಾಖಲಿಸಿತು. ಸುಲಭ ಗುರಿ ಬೆನ್ನಟ್ಟಿದ ಮೀಡಿಯಾ ಕ್ಯಾಪ್ಟನ್ ತಂಡ ೧.೧ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಡಗು ಲೈವ್ ತಂಡ ಚಿತ್ತಾರ ಲಯನ್ಸ್ ತಂಡವನ್ನು ಸೋಲಿಸಿತು. ಕೊಡಗು ಲೈವ್ ತಂಡ ನಿಗದಿತ ೪ ಓವರ್‌ನಲ್ಲಿ ೧ ವಿಕೆಟ್ ನಷ್ಟಕ್ಕೆ ೪೮ ರನ್ ಕಲೆ ಹಾಕಿತು. ಆದರ್ಶ್ ಅದ್ಕಲೇಗಾರ್ ೨೪, ನವೀನ್ ಡಿಸೋಜಾ ೧೩ ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಚಿತ್ತಾರ ಲಯನ್ಸ್ ತಂಡ ೩ ವಿಕೆಟ್‌ಗೆ ೩೩ ರನ್ ದಾಖಲಿಸಿ, ೧೫ ರನ್ ಅಂತರದಲ್ಲಿ ಸೋಲುಂಡಿತು. ಕೊಡಗು ಲೈವ್ ಪರ ನವೀನ್ ಡಿಸೋಜ ೨, ಆದರ್ಶ್ ಅದ್ಕಲೇಗಾರ್ ೧ ವಿಕೆಟ್ ಕಬಳಿಸಿದರು.

ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಮೀಡಿಯಾ ಕ್ಯಾಪ್ಟನ್ ೪ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೩೯ ರನ್ ಕಲೆ ಹಾಕಿತು. ಇಸ್ಮಾಯಿಲ್ ಕಂಡಕರೆ ೧೮ ರನ್ ದಾಖಲಿಸಿದರು. ಗುರಿಬೆನ್ನಟ್ಟಿದ ಸೆನ್ಸಾ ತಂಡ ಜಯಪ್ರಕಾಶ್ ೨೬ ರನ್‌ಗಳ ಒನ್ ಮ್ಯಾನ್ ಶೋ ಪ್ರದರ್ಶನ ತೋರಿದರು ಕೂಡ ತಂಡ ೧ ವಿಕೆಟ್‌ಗೆ ೩೪ ರನ್ ದಾಖಲಿಸಿ ೫ ರನ್‌ಗಳಿಂದ ವಿರೋಚಿತ ಸೋಲು ಕಂಡಿತು.

ಮೊದಲ ಲೀಗ್ ಪಂದ್ಯದಲ್ಲಿ ನಾಡ ಪೆದ ಆಶಾ ತಂಡವನ್ನು ಸೆನ್ಸಾ ತಂಡ ಸೋಲಿಸಿತು. ದ್ವಿತೀಯ ಪಂದ್ಯದಲ್ಲಿ ಮೀಡಿಯಾ ಕ್ಯಾಪ್ಟನ್ ತಂಡ ಟೀಮ್ ಇಂಡಿಯಾ ತಂಡದ ವಿರುದ್ಧ ೨೧ ರನ್ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮುಸ್ತಫಾ ೨೧ ಎಸೆತದಲ್ಲಿ ೩ ಬೌಂಡರಿ, ೬ ಸಿಕ್ಸರ್ ನೆರವಿನೊಂದಿಗೆ ಆಕರ್ಷಕ ಅರ್ಧ ಶತಕ ಸಿಡಿಸಿದರು.

ಚಿತ್ತಾರ ಲಯನ್ಸ್ ತಂಡ ಗೋಣಿಕೊಪ್ಪ ಮೀಡಿಯಾ ಕಿಂಗ್ಸ್ ವಿರುದ್ಧ ೧೬ ರನ್‌ಗಳ ಜಯ ಸಾಧಿಸಿತು. ಕೊಡಗು ಲೈವ್ ತಂಡ ಕಾವೇರಿ ಮಕ್ಕಳು ತಂಡ ವಿರುದ್ಧ ೧೬ ರನ್‌ಗಳ ಗೆಲುವು ಸಾಧಿಸಿತು. ಸಿಎಸ್‌ಕೆ ಸೆನ್ಸಾ ಸ್ಟಾರ್ ಕುಶಾಲನಗರ ತಂಡದ ವಿರುದ್ಧ ಚಿತ್ತಾರ ಲಯನ್ಸ್ ತಂಡ ೧೦ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕಾವೇರಿ ಮಕ್ಕಳು ತಂಡ ಟೀಮ್ ಇಂಡಿಯಾ ತಂಡವನ್ನು ೬ ರನ್‌ಗಳಿಂದ ಮಣಿಸಿತು.

ನಾಡ ಪೆದ ಆಶಾ ತಂಡವನ್ನು ಮೀಡಿಯಾ ಕಿಂಗ್ಸ್ ತಂಡ ೯ ವಿಕೆಟ್‌ಗಳಿಂದ ಮಣಿಸಿತು. ಮೀಡಿಯಾ ಕ್ಯಾಪ್ಟನ್ ಮತ್ತು ಕೊಡಗು ಲೈವ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊAಡು. ಸೂಪರ್ ಓವರ್‌ನಲ್ಲಿ ಮೀಡಿಯಾ ಕ್ಯಾಪ್ಟನ್ ತಂಡ ಜಯಭೇರಿ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ನಾಡ ಪೆದ ಆಶಾ ತಂಡವನ್ನು ಚಿತ್ತಾರ ಲಯನ್ಸ್ ತಂಡ ೯ ವಿಕೆಟ್‌ಗಳಿಂದ ಮಣಿಸಿತು.

ಟೀಮ್ ಇಂಡಿಯಾ ತಂಡ ಕೊಡಗು ಲೈವ್ ವಿರುದ್ಧ ೯ ವಿಕೆಟ್ ಜಯ ಸಾಧಿಸಿತು. ಮೀಡಿಯಾ ಕಿಂಗ್ಸ್ ವಿರುದ್ಧ ಸೆನ್ಸಾ ತಂಡ ೯ ವಿಕೆಟ್‌ಗಳ ಗೆಲುವು ಸಾಧಿಸಿತು. ಕಾವೇರಿ ಮಕ್ಕಳು ತಂಡದ ವಿರುದ್ಧ ಮೀಡಿಯಾ ಕ್ಯಾಪ್ಟನ್ ತಂಡ ೬ ರನ್‌ಗಳ ಜಯ ಸಾಧಿಸಿತು.

ಪತ್ರಕರ್ತರ ಹಬ್ಬ

ಜಿಲ್ಲೆಯ ವಿವಿಧ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಸುತ್ತಿರುವ ಒಟ್ಟು ೯೭ ಪತ್ರಕರ್ತರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಚುಮುಚುಮ ಚಳಿ, ತುಂತುರು ಮಳೆ ನಡುವೆ ಪತ್ರಕರ್ತರು ಎಂಜಾಯ್ ಮಾಡಿದರು. ಸಿಎಸ್‌ಕೆ ಸೆನ್ಸಾ ಸ್ಟಾರ್ ಕುಶಾಲನಗರ ತಂಡದ ವಿಶ್ವ ಕುಮಾರ್ ವಿವಿಧ ಕೇಶ ವಿನ್ಯಾಸದೊಂದಿಗೆ ಪ್ರೇಕ್ಷಕರ ಗಮನ ಸೆಳೆದರು. ಮಾಲ್ದಾರೆ ಸಾಜಿ ನೇತೃತ್ವದ ಚಂಡೆ ಮತ್ತು ಕುಶಾಲನಗರದ ನಾಸಿಕ್ ಬ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ರಂಗೇರುವAತೆ ಮಾಡಿತು.

ಬಹುಮಾನಗಳ ಸುರಿಮಳೆ

ಮೀಡಿಯಾ ಕ್ಯಾಪ್ಟನ್ ೧೨ ತಂಡದ ನಾಯಕ ಎ.ಎಸ್. ಮುಸ್ತಫಾ ಮಿಂಚಿದರು. ಅನುಭವಿ ಕ್ರಿಕೆಟ್ ಆಟಗಾರರಾಗಿರುವ ಮುಸ್ತಾಫ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವAತೆ ಮಾಡಿದರು. ಪಂದ್ಯಾವಳಿ ಪುರುಷತ್ತೋಮ, ಬೆಸ್ಟ್ ಬ್ಯಾಟ್ಸ್ಮನ್, ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ, ಒಂದು ಪಂದ್ಯದಲ್ಲಿ ವೈಯಕ್ತಿಕ ಹೆಚ್ಚು ರನ್ ಹೊಡೆದ ಆಟಗಾರ, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನ ತಮ್ಮದಾಗಿಸಿಕೊಂಡರು.

ಇಸ್ಮಾಯಿಲ್ ಕಂಡಕರೆ ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್, ಪಂದ್ಯಾವಳಿಯಲ್ಲಿ ಒಟ್ಟು ಹೆಚ್ಚು ರನ್ ಹೊಡೆದ ಆಟಗಾರ ಹೇಮಂತ್, ಚನ್ನನಾಯಕ್ ಬೆಸ್ಟ್ ವಿಕೆಟ್ ಕೀಪರ್, ಬೆಸ್ಟ್ ಕ್ಯಾಚ್, ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಜ್ಞಾ ರಾಜೇಂದ್ರ, ಉತ್ತಮ ನಾಯಕ ಆದರ್ಶ್ ಅದ್ಕಲೇಗಾರ್, ಉತ್ತಮ ಉಪನಾಯಕ ನವೀನ್ ಡಿಸೋಜ, ಉತ್ಸಾಹಿ ಆಟಗಾರ ಮೋಹನ್‌ರಾಜ್, ಶಿಸ್ತಿನ ತಂಡ ಟೀಮ್ ಇಂಡಿಯಾ, ಜನಮನ ಗೆದ್ದ ಆಟಗಾರ ವಿಶ್ವ ಕುಂಬೂರು, ಉದಯೋನ್ಮುಖ ಆಟಗಾರ ಪ್ರಜ್ವಲ್ ರಾಜೇಂದ್ರ ವಿಶೇಷ ಬಹುಮಾನ ತಮ್ಮದಾಗಿಸಿ ಕೊಂಡರು.

ಮಡಿಕೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ರಾತ್ರಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಬಹುಮಾನ ವಿತರಿಸಿದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಯುಫೋರಿಯಾಜ್ ಸಂಸ್ಥೆ ಸಂಸ್ಥಾಪಕ ಆ್ಯಂಡಿ ಆನಂದ್, ಸಿಇಒ ಆಸ್ಕರ್ ರಿಚ್ಚಿ ಚಾರ್ಲ್ಸ್, ಪ್ರಮುಖರಾದ ರೋಷನ್ ಚಾರ್ಲ್ಸ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಪಾಲ್ಗೊಂಡಿದ್ದರು.

ನಗದು ಬಹುಮಾನ

ಪ್ರಥಮ ಸ್ಥಾನ ಪಡೆದ ಮೀಡಿಯಾ ಕ್ಯಾಪ್ಟನ್ ೧೨ ತಂಡಕ್ಕೆ ಬೆಂಗಳೂರಿನ ಯುಫೋರಿಯಾಜ್ ಗ್ರೂಪ್ ಪ್ರಾಯೋಜಿಸಿದ್ದ ೮೯ ಸಾವಿರ ರೂಪಾಯಿ, ದ್ವಿತೀಯ ಸ್ಥಾನ ಪಡೆದ ಕೊಡಗು ಲೈವ್ ೨೪ ಈಗಲ್ಸ್ ತಂಡಕ್ಕೆ ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಪ್ರಾಯೋಜಿಸಿದ್ದ ೫೦ ಸಾವಿರ ರೂ ಹಾಗೂ ಸೆಮಿಫೈನಲ್ ಹಂತದಲ್ಲಿ ಪರಾಭವಗೊಂಡ ಕುಶಾಲನಗರದ ಸೆನ್ಸಾ ಮತ್ತು ಚಿತ್ತಾರ್ ಲಯನ್ಸ್ ತಂಡಕ್ಕೆ ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಪ್ರಾಯೋಜಿಸಿದ್ದ ತಲಾ ೧೦ ಸಾವಿರ ರೂ. ನಗದು ಬಹುಮಾನ ವಿತರಿಸಲಾಯಿತು. ನಾಪಂಡ ಮುತ್ತಪ್ಪ, ಮುದ್ದಪ್ಪ ಸಹೋದರರು ಪ್ರಾಯೋಜಿಸಿದ ಟ್ರೋಫಿಗಳನ್ನು ತಂಡಗಳಿಗೆ ಹಾಗೂ ಆಟಗಾರರಿಗೆ ವಿತರಿಸಲಾಯಿತು.