ಕೂಡಿಗೆ, ನ. ೨೮: ದಿನದಿಂದ ದಿನಕ್ಕೆ ವಾಣಿಜ್ಯ ನಗರದ ಮಾದರಿಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಕೂಡಿಗೆ ಸರ್ಕಲ್ನಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಹ ಪ್ರಸಂಗ ಎದುರಾಗಿದೆ.
ಕೂಡಿಗೆ ಸರ್ಕಲ್ನಲ್ಲಿ ವಿಭಜಕ ರಸ್ತೆಯು ಇದ್ದು ಹಾಸನ ಹೆದ್ದಾರಿಯ ಮುಖ್ಯ ರಸ್ತೆ ಮತ್ತು ಸೋಮವಾರಪೇಟೆ ಕಡೆಗೆ ಹೋಗುವ ಮುಖ್ಯ ರಸ್ತೆಯ ಕೇಂದ್ರವಾಗಿದೆ. ದಿನಂಪ್ರತಿ ನೂರಾರು ಪ್ರಯಾಣಿಕರು, ಸಾರ್ವಜನಿಕರು ಕೂಡಿಗೆ ಸರ್ಕಲ್ ಮೂಲಕ ಬೇರೆ ಬೇರೆ ಕಡೆ ಪ್ರಯಾಣ ಬೆಳೆಸುತ್ತಾರೆ. ಆದರೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅಗತ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲದಾಗಿದೆ.
ಮೊದಲು ಇದ್ದ ಶೌಚಾಲಯ ವನ್ನು ಗ್ರಾಮ ಪಂಚಾಯಿತಿ ಕಾಲುವೆ ದುರಸ್ತಿ ನೆಪದಲ್ಲಿ ತೆಗೆದು ಹಾಕಿ ಒಂದು ವರ್ಷ ಕಳೆದರೂ, ಶೌಚಾಲಯ ನಿರ್ಮಾಣ ಮಾಡುವ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ತೀರ್ಮಾನ ಮಾಡಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.
ಸ್ವಚ್ಛ ಭಾರತ್ ಯೋಜನೆ ಮತ್ತು ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಬೇರೆ ಬೇರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಬೆಳೆಯುತ್ತಿರುವ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕ್ರಿಯಾ ಯೋಜನೆಯನ್ನು ತಯಾರಿಸಲು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಗಿದೆ ಎಂದು ಸ್ಥಳೀಯ ಮುಖ್ಯಸ್ಥರಾದ ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ, ರಾಜಣ್ಣ, ಕೃಷ್ಣ ಮಂಜುನಾಥ, ಕುಮಾರ್, ಅಮಿತ್ ಕುಮಾರ್, ಪ್ರಸಾದ್ ಆರೋಪಿಸಿದ್ದಾರೆ.
ಸಂಬAಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಶೀಘ್ರವಾಗಿ ಸುಲಭ ಶೌಚಾಲಯ ಘಟಕ ಪ್ರಾರಂಭ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.