(ವರದಿ : ಕೆ.ಎಸ್.ಮೂರ್ತಿ)

ಕಣಿವೆ, ನ. ೨೮ : ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಪೋಷಕರ ಪಾಲಿಗೆ ಕಾಮಧೇನುವೇ ಆಗಿರುವ ಕುಶಾಲನಗರದ ಸರ್ಕಾರಿ ಪಿಯು ಕಾಲೇಜು (ಗುಂಡಿ ಕಾಲೇಜು) ಮೂಲಸೌಲಭ್ಯಗಳಿಗಾಗಿ ದಶಕಗಳಿಂದಲೂ ಕಾದಿದೆ. ಇನ್ನೂನು ಕಾಯುತ್ತಲೇ ಇದೆ.

೭೫೦ ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಈ ಕಾಲೇಜಿನಲ್ಲಿ ಮಕ್ಕಳಿಗೆ ಗುಣಮಟ್ಟದ ಪಾಠ ಹೇಳಬೇಕಾದ ಉಪನ್ಯಾಸಕರ ಕೊರತೆಯಿದೆ.

ಹಾಗಾಗಿ ಸದ್ಯಕ್ಕೆ ಹೊರಗುತ್ತಿಗೆಯ ಆಧಾರದಲ್ಲಿ ೬ ಮಂದಿ ಉಪನ್ಯಾಸಕರನ್ನು ಮಾಸಿಕ ೯ ಸಾವಿರ ರೂ. ವೇತನ ನೀಡಿ ಕಾಲೇಜು ಅಭಿವೃದ್ಧಿ ಸಮಿತಿ ನೇಮಕ ಮಾಡಿಕೊಂಡಿದೆ. ಆದರೆ ಈ ಉಪನ್ಯಾಸಕರಿಗೆ ನೀಡುತ್ತಿರುವ ೯ ಸಾವಿರ ಸಂಭಾವನೆ ಏನೇನು ಸಾಲದು.

ಸರ್ಕಾರದ ಖಾಯಂ ಉಪನ್ಯಾಸಕರಿಗೆ ಸರ್ಕಾರ ಕನಿಷ್ಟ ಅರ್ಧ ಲಕ್ಷಕ್ಕೂ ಹೆಚ್ಚಿನ ವೇತನ ನೀಡುತ್ತಿರುವ ಈ ದಿನಗಳಲ್ಲಿ ಆ ಖಾಯಂ ಉಪನ್ಯಾಸಕರಷ್ಟೆ ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡಿರುವ ಈಗಿನ ಗೌರವ ಉಪನ್ಯಾಸಕರಿಗೆ ಕನಿಷ್ಟ ೨೫ ಸಾವಿರ ರೂ ಆದರೂ ಮಾಸಿಕ ಸಂಭಾವನೆ ನೀಡಬೇಕು ಎಂಬುದು ಪೋಷಕರ ಆಗ್ರಹವಾಗಿದೆ.

ಕಾಲೇಜಿಗೆ ತಡೆಗೋಡೆ ಇಲ್ಲ

ಕಾಲೇಜಿನಲ್ಲಿ ಸೂಕ್ತವಾದ ತಡೆಗೋಡೆ ಇಲ್ಲದ ಕಾರಣ ರಾತ್ರಿ ಹೊತ್ತಿನಲ್ಲಿ ಕಿಡಿಗೇಡಿಗಳು ಇಲ್ಲಿಗೆ ಬಂದು ಮದ್ಯ ಸೇವನೆ, ಧೂಮಪಾನ ಮಾಡಿ ಬಳಸಿದ ಪರಿಕರಗಳನ್ನು ಎಸೆದು ಹೋಗುತ್ತಿದ್ದಾರೆ. ಹಾಗಾಗಿ ಬೆಳಿಗ್ಗೆ ಸಮಯ ಪ್ರತಿ ದಿನ ಕಾಲೇಜು ಆವರಣದಲ್ಲಿ ಮದ್ಯ ಹಾಗೂ ನೀರಿನ ಖಾಲಿ ಬಾಟಲಿಗಳು, ಬೀಡಿ ಸಿಗರೇಟು ತುಂಡುಗಳು ಹಾಗೂ ಮಾಂಸದ ಚೂರುಗಳನ್ನು ಆಯ್ದು ಸ್ವಚ್ಛಗೊಳಿಸುವ ಕೆಲಸವಾಗುತ್ತಿದೆ ಎನ್ನುತ್ತಾರೆ ಕಾಲೇಜಿನ ಉಪನ್ಯಾಸಕರು.

ಸೂಕ್ತ ತಡೆಗೋಡೆ ಹಾಗೂ ಗೇಟು ಇಲ್ಲದ ಕಾರಣ, ಸಾರ್ವಜನಿಕರು ಕಾಲೇಜಿನ ಮೈದಾನದಲ್ಲಿ ಬೈಕ್ - ಕಾರುಗಳನ್ನು ಕಲಿಯಲು ಧಾವಿಸುತ್ತಾರೆ. ಇನ್ನು ಕೆಲವರು ಬೇರೆ ಬೇರೆ ಆಟಗಳನ್ನು ಆಟಗಳಾಡಲು ಬಳಸುತ್ತಾರೆ. ಆದರೆ ಆಟಕ್ಕೆ ಬಳಸಲು ಕಾಲೇಜಿನ ಅಭ್ಯಂತರವಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಕಾಲೇಜಿನ ಕಟ್ಟಡಗಳಿಗೆ ಅಳವಡಿಸಿರುವ ಕಿಟಕಿಗಳ ಗಾಜುಗಳನ್ನು ಒಡೆದು ಪುಡಿಗೈದಿದ್ದಾರೆ.

ಇದು ಸಹಿಸಲಾಗದು ಎಂದಿರುವ ಕಾಲೇಜಿನ ಪ್ರಾಂಶುಪಾಲ ಸತೀಶ್ ಬಾಬು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅವರು, ನಮಗೆ ಅತಿ ಅಗತ್ಯವಾಗಿ ಕಾಲೇಜಿನ ಜಾಗದ ಸುತ್ತಲೂ ತಡೆಗೋಡೆ ನಿರ್ಮಿಸಿ ಗೇಟು ಅಳವಡಿಸಿದರೆ ನಾವುಗಳು ಬೀಗ ಹಾಕಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಅಗತ್ಯ ಪ್ರಯೋಗಾಲಯಗಳಿಲ್ಲ

ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರಯೋಗಾ ಲಯಗಳಿಗೆ ಸೂಕ್ತವಾದ ಎರಡು ಕೊಠಡಿಗಳ ಕೊರತೆ ಇದೆ. ಈಗಾಗಲೇ ನಾವು ಪ್ರೌಢ ಶಾಲಾ ವಿಭಾಗಕ್ಕೆ ಸೇರಿದ ಕೊಠಡಿಯನ್ನು ಬಳಸುತ್ತಿದ್ದೇವೆ. ಇನ್ನು ಕಾಲೇಜು ಕಚೇರಿಯಲ್ಲಿ ಬೇಕಾದ ಗುಮಾಸ್ತರ ಹುದ್ದೆ ಖಾಲಿ ಇದೆ. ಹಾಗೆಯೇ ಕಚೇರಿ ಸಹಾಯಕರ ಹುದ್ದೆಯೂ ಖಾಲಿ ಇದೆ. ಕೂಡಲೇ ಈ ಸೌಲಭ್ಯಗಳು ದೊರಕಿದರೆ ಮಕ್ಕಳಿಗೆ ಇನ್ನಷ್ಟು ಹೆಚ್ಚಿನ ಅನುಕೂಲ ಆಗಲಿದೆ ಎಂಬುದು ಪ್ರಾಂಶುಪಾಲರ ಅಭಿಲಾಶೆ.

ಗುಣಮಟ್ಟದ ಪಾಠ ಪ್ರವಚನ

ಸರ್ಕಾರಿ ಕಾಲೇಜು ಆದರೂ ಕೂಡ ಯಾವುದೇ ಖಾಸಗಿ ಕಾಲೇಜುಗಳಿಗೂ ಕಡಿಮೆ ಇಲ್ಲದಂತೆ ಅತ್ಯುತ್ತಮ ಗುಣಮಟ್ಟದ ಪಾಠ ಪ್ರವಚನಗಳು ಇಲ್ಲಿ ನಡೆಯುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಹಾಗಾಗಿ ಗ್ರಾಮೀಣ ಪ್ರದೇಶಗಳ ಬಹಳಷ್ಟು ಮಕ್ಕಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಅಂದರೆ ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ದಂಡೆಯ ಗ್ರಾಮಗಳ ಹತ್ತಾರು ಗ್ರಾಮಗಳ ನೂರಾರು ಮಕ್ಕಳು, ಇತ್ತ ನಂಜರಾಯಪಟ್ಟಣ, ರಂಗಸಮುದ್ರ, ಶಿರಂಗಾಲ, ಹೆಬ್ಬಾಲೆ, ಹಾರಂಗಿ, ಯಡವನಾಡು, ಕೂಡಿಗೆ, ಗುಡ್ಡೆಹೊಸೂರು ಸೇರಿದಂತೆ ಕುಶಾಲನಗರ ತಾಲೂಕಿನಾದ್ಯಂತ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ.

ಇದೀಗ ಕಾಲೇಜಿನ ಮೊದಲ ಪಿಯುಸಿ ತರಗತಿಯಲ್ಲಿ ೨೩೫ ಬಾಲಕರು ಹಾಗೂ ೨೭೦ ಬಾಲಕಿಯರು ಸೇರಿ ೪೫೨ ವಿದ್ಯಾರ್ಥಿಗಳು ದಾಖಲಾಗಿದ್ದರೆ, ದ್ವಿತೀಯ ಪಿಯುಸಿಯಲ್ಲಿ ೧೨೭ ಬಾಲಕರು ಹಾಗೂ ೧೭೬ ಬಾಲಕಿಯರು ಸೇರಿ ಒಟ್ಟು ೩೦೩ ವಿದ್ಯಾರ್ಥಿಗಳಿದ್ದಾರೆ. ಅಂದರೆ ಈ ಬಾರಿ ಕಳೆದ ವರ್ಷಕ್ಕಿಂತ ೧೦೦ ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆದಿದ್ದಾರೆ. ಮೊದಲ ಹಾಗೂ ಎರಡನೇ ಪಿಯುಸಿ ಸೇರಿ ಒಟ್ಟು ೭೫೫ ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ೩೬೨ ಬಾಲಕಿಯರು ೩೩೩ ಬಾಲಕರು ಇದ್ದಾರೆ.

ಒಟ್ಟಾರೆ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದ ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿರುವ ಈ ಸರ್ಕಾರಿ ಕಾಲೇಜಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ಷೇತ್ರದ ಶಾಸಕರು ಹಾಗೂ ಪ.ಪೂ. ಶಿಕ್ಷಣ ಮಂಡಳಿ ಅಧಿಕಾರಿಗಳು ಮುಂದಾಗಬೇಕಿದೆ ಅಷ್ಟೆ.