ಕುಶಾಲನಗರ, ನ. ೨೭: ಪ್ರಶಾಂತ್ ಕಲ್ಲೂರು ನೇತೃತ್ವದ ವೀರಶೈವ ಲಿಂಗಾಯತ ಮಹಾವೇದಿಕೆ ಮತ್ತು ಯುವ ವೇದಿಕೆ ವತಿಯಿಂದ ಇದೆ ತಾ. ೨೯ ರಂದು ಡಾ. ಶಿವಕುಮಾರ ಸ್ವಾಮೀಜಿಗಳ ೪೫ ಅಡಿ ಎತ್ತರದ ಬೃಹತ್ ಕಟೌಟ್‌ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಕೊಡ್ಲಿಪೇಟೆಯ ಕಿರುಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ತಿಳಿಸಿದರು.

ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುತ್ತೂರು ಮಹಾ ಸಂಸ್ಥಾನದ ಜಗದ್ಗುರು ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ೫೦ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ ೫.೩೦ಕ್ಕೆ ಲಕ್ಷ ಪಕ್ಷ ಬಿಲ್ವಾರ್ಚನೆಯೊಂದಿಗೆ ಆರಂಭವಾಗಿ ೧೨.೩೦ಕ್ಕೆ ಮಹಾಮಂಗಳಾರತಿ ನಡೆಯಲಿದೆ. ೧ ಗಂಟೆಗೆ ಪೂಜ್ಯರ ಗದ್ದುಗೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಲಿದೆ ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಕೊಡಗಿನಿಂದ ಪಕ್ಷಾತೀತವಾಗಿ, ಜಾತ್ಯತೀತವಾಗಿ ಶ್ರೀಮಠದ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ೫೦ ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ.

ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಕೂಡುಮಂಗಳೂರು ಪ್ರಶಾಂತ್, ಸಾಗರ್ ತೊರೆನೂರು ಮತ್ತು ಮಠದ ಭಕ್ತ ವಿ.ಸಿ. ಅಮೃತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.