ಸಿದ್ದಾಪುರ, ನ. ೨೬: ಸಿದ್ದಾಪುರ ಸಮೀಪದ ಘಟ್ಟದಳ ಬಳಿ ಒತ್ತುವರಿ ಜಾಗವನ್ನು ವಶಪಡಿಸಿಕೊಂಡಿರುವ ಜಾಗದಲ್ಲಿ ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾ.ಪಂ. ವತಿಯಿಂದ ಕಸ ವಿಲೇವಾರಿ ಘಟಕ ಪ್ರಾರಂಭಿಸುವ ಹಿನ್ನೆಲೆ ಜಾಗವನ್ನು ವೀರಾಜಪೇಟೆ ತಾಲೂಕು ಕಾರ್ಯನಿರ್ವ ಹಣಾಧಿಕಾರಿ ಅಪ್ಪಣ್ಣ ಪರಿಶೀಲನೆ ಮಾಡಿದರು.
ಸಿದ್ದಾಪುರ ಸಮೀಪದ ಘಟ್ಟದಳದ ಬಳಿ ತೋಟದ ಮಾಲೀಕರೊಬ್ಬರು ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಭೂಮಿಯನ್ನು ಕಂದಾಯ ಇಲಾಖಾಧಿಕಾರಿಗಳು ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಜಾಗವನ್ನು ಇತ್ತೀಚೆಗೆ ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾ.ಪಂ.ಗೆ ಕಂದಾಯ ಇಲಾಖಾಧಿಕಾರಿಗಳು ತಲಾ ೫೦ ಸೆಂಟ್ ಜಾಗವನ್ನು ಹಸ್ತಾಂತರಿ ಸಿದ್ದರು. ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸಲು ಎರಡು ಗ್ರಾ.ಪಂ.ಗಳು ನಿರ್ಧರಿಸಿತ್ತು. ಈ ಹಿನ್ನೆಲೆ ವೀರಾಜಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಈ ಕುರಿತು ಮಾಹಿತಿ ನೀಡಿದ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ರೀನಾ ತುಳಸಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲದೆ ಸಮಸ್ಯೆ ಎದುರಾಗಿತ್ತು. ಇದೀಗ ಘಟ್ಟದಳ ಬಳಿ ಸರ್ಕಾರಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡು ಆ ಜಾಗದಲ್ಲಿ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಲು ಜಾಗ ಲಭಿಸಿರುತ್ತದೆ. ಕಸ ವಿಲೇವಾರಿ ಸಮಸ್ಯೆ ಬಗೆಹರಿದಿದ್ದು, ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಜಿಲ್ಲಾ ಸಂಯೋಜಕ ಎ.ಎಂ. ಸೂರಜ್ ಗ್ರಾ.ಪಂ. ಸದಸ್ಯರುಗಳಾದ ಸೈನುಲ್ಲಾ, ಹಸನ್, ಸಿದ್ದಾಪುರ ಪಿಡಿಓ ಮೇದಪ್ಪ, ಮಾಲ್ದಾರೆ ಪಿಡಿಓ ರಾಜೇಶ್ ಹಾಗೂ ಇನ್ನಿತರರು ಹಾಜರಿದ್ದರು.