ಕೊಡ್ಲಿಪೇಟೆ,ನ.೨೫: ಕೊಡ್ಲಿಪೇಟೆ ಹೋಬಳಿಯಾದ್ಯಂತ ಅಕಾಲಿಕ ಮಳೆಯಿಂದಾಗಿ ನಷ್ಟಕ್ಕೊಳಗಾಗಿರುವ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳ ಸರ್ವೆ ಕಾರ್ಯ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖಾಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಈ ಭಾಗದಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಅರೇಬಿಕಾ ಕಾಫಿ ಸೇರಿದಂತೆ ಕರಿಮೆಣಸು, ಇನ್ನಿತರ ಬೆಳೆಗಳು ಹಾನಿಗೀಡಾಗಿದ್ದು, ಸರ್ಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್, ಕಂದಾಯ ಇಲಾಖೆಯ ಅಧಿಕಾರಿ ಮನು ಅವರನ್ನೊಳಗೊಂಡ ತಂಡ ಕೊಡ್ಲಿಪೇಟೆ ಹೋಬಳಿಯ ಬೆಸೂರು, ಕಟ್ಟೆಪುರ, ನಿಲುವಾಗಿಲು, ಆಗಳಿ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದರು.