ಕಣಿವೆ, ನ. ೨೫: ಕುಶಾಲನಗರ ಪಟ್ಟಣ ಪಂಚಾಯಿತಿಯ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಪಂಚಾಯಿತಿ ವಾಣಿಜ್ಯ ಸಂಕೀರ್ಣ ಹಾಗೂ ಕಚೇರಿ ಪ್ರಾಂಗಣ ಕಾಮಗಾರಿ ನೆನೆಗುದಿಗೆ ಬಿದ್ದು ವರ್ಷಗಳೇ ಕಳೆದಿವೆ. ಆದರೆ ಪಂಚಾಯಿತಿ ಆಡಳಿತ ಮಾತ್ರ ಈ ಬಗ್ಗೆ ಸೊಲ್ಲೆತ್ತದೇ ಮೌನ ವಹಿಸಿರುವುದು ಏಕೆ ಎಂದು ಇಲ್ಲಿನ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಳೆದ ಎರಡೂವರೆ ವರ್ಷಗಳ ಹಿಂದೆ ಪಂಚಾಯಿತಿ ಅನುದಾನದ ೪.೪೫ ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಕಟ್ಟಡ ಕಾಮಗಾರಿಯ ನೆಲ ಅಂತಸ್ತಿಗೆ ಸುತ್ತಲೂ ಪೌಂಡೇಷನ್ ಸೇರಿ ಪಿಲ್ಲರ್ ಗಳ ನಿರ್ಮಾಣ ಕಾಮಗಾರಿ ನಡೆದಿದೆ. ಇದಕ್ಕೆ ಪಂಚಾಯಿತಿಯಿAದ ೨ ಕೋಟಿಗೂ ಅಧಿಕ ಹಣವನ್ನು ಗುತ್ತಿಗೆದಾರನಿಗೆ ನೀಡಲಾಗಿದ್ದು ಇದು ಅನುಮಾನಕ್ಕೆ ಆಸ್ಪದ ಉಂಟು ಮಾಡಿದೆ.

ಅಂದರೆ ಅಧಿಕ ಹಣ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ನಡೆದಿರುವ ಕಾಮಗಾರಿ ಹಾಗೂ ಪಾವತಿಸಿರುವ ಪಂಚಾಯಿತಿಯ ಹಣದ ಬಗ್ಗೆ ತನಿಖೆಯಾಗಬೇಕಿದೆ ಎಂದು ಪಂಚಾಯಿತಿಯ ಕೆಲ ಸದಸ್ಯರ ಒತ್ತಾಯವಾಗಿದೆ.

ಪಂಚಾಯಿತಿಗೆ ಜನಪ್ರತಿನಿಧಿಗಳು ಚುನಾಯಿತಗೊಂಡ ಬಳಿಕವೂ ಅವರಿಗೆ ಪಂಚಾಯಿತಿಯೊಳಗೆ ಅಧಿಕಾರ ನೀಡುವುದು ಸತತವಾಗಿ ಎರಡು ವರ್ಷಗಳ ಕಾಲ ವಿಳಂಬವಾದ ಅವಧಿಯಲ್ಲಿ ಇದ್ದಂತಹ ಆಡಳಿತಾಧಿಕಾರಿಗಳ ಆಳ್ವಿಕೆಯಲ್ಲಿ ಅಧಿಕಾರಿಗಳು ಸಾರ್ವಜನಿಕ ಹಣವನ್ನು ಸರಿಯಾಗಿ ಬಳಕೆ ಮಾಡಿಲ್ಲ ಎಂಬದು ಹಲವರ ಟೀಕೆಯಾಗಿದೆ. ಪಟ್ಟಣದ ಹೃದಯ ಭಾಗದಲ್ಲಿನ ಅಂದಾಜು ಸುಮಾರು ಅರ್ಧ ಎಕರೆ ವಿಸ್ತೀರ್ಣದಲ್ಲಿ ತಲೆಎತ್ತುತ್ತಿರುವ ಪಟ್ಟಣದ ಆಡಳಿತ ಸೌಧಕ್ಕೆ ಅಡ್ಡಿಯಾಗಿರುವ ಅಡೆ ತಡೆಗಳನ್ನು ನಿವಾರಿಸಲು ಪಂಚಾಯಿತಿ ಆಡಳಿತ ಮುಂದಾಗಬೇಕಿದೆ. ಸ್ಥಗಿತಗೊಂಡಿರುವ ಭವನದ ಕಾಮಗಾರಿಗೆ ಮರುಜೀವ ಕೊಟ್ಟು ಶೀಘ್ರದಲ್ಲಿ ಚಾಲನೆ ನೀಡಬೇಕಿದೆ.

ಕಳೆದ ಮೂರು ವರ್ಷಗಳಿಂದ ಮಾಸಿಕ ೫೮ ಸಾವಿರ ದಂತೆ ವಾರ್ಷಿಕ ಆರು ಲಕ್ಷ ರೂಗಳನ್ನು ವ್ಯಯಿಸಿ ಖಾಸಗಿ ಕಟ್ಟಡದಲ್ಲಿ ಪಂಚಾಯಿತಿಯ ಆಡಳಿತ ಕಚೇರಿ ಕಾರ್ಯನಿರ್ವಹಿಸುತ್ತಿರುವುದರಿಂದ ಪಂಚಾಯಿತಿಗೆ ಅನಗತ್ಯವಾಗಿ ಆಗುತ್ತಿರುವ ವೆಚ್ಚವನ್ನು ತಪ್ಪಿಸಲೋಸುಗ ಸ್ವಂತದ್ದಾದ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಹಾಗೆಯೇ ಐದಾರು ಕೋಟಿ ರೂಗಳನ್ನು ಖರ್ಚು ಮಾಡಿ ಕಾವೇರಿ ಬಡಾವಣೆಯಲ್ಲಿ ನಿರ್ಮಿಸಿರುವ ಕನ್ನಡ ಭವನ ಕಾಮಗಾರಿಯೂ ಅಪೂರ್ಣಗೊಂಡಿದೆ.

ಅತ್ತ ಪಂಚಾಯಿತಿ ಒಡೆತನದಲ್ಲಿರುವ ನ್ಯಾಯಾಂಗ ಹೋರಾಟದಲ್ಲಿ ಪಡೆದಂತಹ ವೆಂಕಟೇಶ್ವರ ಚಿತ್ರಮಂದಿರದ ಕಟ್ಟಡವನ್ನು ಪುನರುಜ್ಜೀವನಗೊಳಿಸಿ ಅಲ್ಲಿ ಅಥವಾ ಕನ್ನಡ ಭವನದಲ್ಲಿ ತಾತ್ಕಾಲಿಕವಾಗಿ ಪಂಚಾಯಿತಿ ಕಚೇರಿ ತೆರೆದರೆ ಅನಗತ್ಯವಾಗಿ ಕಟ್ಟುತ್ತಿರುವ ಬಾಡಿಗೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ. ಇನ್ನಾದರೂ ಪಂಚಾಯಿತಿಯ ೧೬ ಮಂದಿ ಚುನಾಯಿತರು ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರು ಸೇರಿ ಒಮ್ಮತದ ಚರ್ಚೆ ನಡೆಸಿ ಪಂಚಾಯಿತಿ ಭವನ ಕಾಮಗಾರಿ ಸೇರಿದಂತೆ ಇನ್ನಿತರೇ ಜನೋಪಯೋಗಿ ಯೋಜನೆಗಳಿಗೆ ಸರ್ವಸಮ್ಮತದ ನಿಲುವು ತಳೆಯಬೇಕಿದೆ. - ಕೆ.ಎಸ್. ಮೂರ್ತಿ