ಕಡಂಗ, ನ. ೨೬: ಸಮೀಪದ ಅರಪಟ್ಟು ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮವನ್ನು ಅರಪಟ್ಟು ಆಯುರ್ವೇದಿಕ್ ವೈದ್ಯಾಧಿಕಾರಿ ಡಾ. ಶೈಲಜಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಈ ಭಾಗದಲ್ಲಿರುವ ಊರಿನ ಹಿರಿಯ ಗ್ರಾಮಸ್ಥರು ಉಚಿತ ವೈದ್ಯಕೀಯ ತಪಾಸಣೆ ಸದುಪಯೋಗವನ್ನು ಪಡೆಯಬೇಕೆಂದು ಸಲಹೆ ಮಾಡಿದರು.

ಮತ್ತೊಬ್ಬ ಅತಿಥಿಗಳಾದ ಗ್ರಾಮ ಪಂಚಾಯಿತಿ ಸದಸ್ಯ ಸುಬೀರ್ ಸಿ.ಈ. ಮಾತನಾಡಿ, ಆರೋಗ್ಯ ಇಲಾಖೆಯ ಜೊತೆ ಸದಾ ಸಂಪರ್ಕದಲ್ಲಿ ಇದ್ದುಕೊಂಡು ಈ ತರಹದ ವೈದ್ಯಕೀಯ ತಪಾಸಣೆ ಕಾರ್ಯಕ್ರಮಕ್ಕೆ ಊರಿನ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ನುಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರಾದ ಸುಮಿತ್ರ, ಜಮುನಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.