ಮಡಿಕೇರಿ, ನ. ೨೬: ವಿಧಾನ ಪರಿಷತ್ ಚುನಾವಣೆಗೆ ಜಾತ್ಯತೀತ ಜನತಾದಳದಿಂದ ಉಮೇದುವಾರಿಕೆ ಸಲ್ಲಿಸಿದ್ದ ಇಸಾಖ್ ಖಾನ್ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ.

ಈ ಬಗ್ಗೆ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಇಸಾಕ್ ಖಾನ್, ಕಾಂಗ್ರೆಸ್‌ನಲ್ಲಿರುವ ಅಲ್ಪಸಂಖ್ಯಾತ ನಾಯಕರ ಅಪಪ್ರಚಾರದಿಂದ ನೊಂದು ಉಮೇದುವಾರಿಕೆ ಹಿಂಪಡೆಯಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತದೆ. ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಕರೆ ಮಾಡಿ ಉಮೇದುವಾರಿಕೆ ಹಿಂಪಡೆಯಲು ಮನವಿ ಮಾಡಿದರು. ಅವರ ಮಾತಿಗೆ ಬೆಲೆ ನೀಡಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಎಂ.ಎಲ್.ಸಿ. ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಘಟಕಕ್ಕೆ ನೀಡಿದ್ದರು. ಅದರಂತೆ ಅಲ್ಪಸಂಖ್ಯಾತ ನಾಯಕನಿಗೆ ಬಿ.ಫಾರಂ ನೀಡಲಾಗಿತ್ತು. ಬಳಿಕ ರಾಜಕೀಯವಾಗಿ ಸೊರಗುತ್ತಿರುವ ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿತು. ಇದೀಗ ಇದರಿಂದ ಮುಕ್ತರಾಗಲು ಸ್ಪರ್ಧೆಯಿಂದ ಹೊರಬಂದಿದ್ದೇವೆ. ಇದೀಗ ಅವರು ಗೆಲುವು ದಾಖಲಿಸಲಿ ಎಂದು ಸವಾಲೆಸೆÀದ ಅವರು, ವರಿಷ್ಠರ ಆದೇಶದಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇವೆ. ಈ ಬಾರಿ ತಟಸ್ಥವಾಗಿರುತ್ತೇವೆ ಎಂದು ಹೇಳಿದರು.