ಮಡಿಕೇರಿ, ನ. ೨೫: ಪ್ರಸಕ್ತ ವರ್ಷವಿಡೀ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ರೀತಿಯ ಸನ್ನಿವೇಶವೇ ಕಂಡುಬAದಿದೆ. ಈ ಬಾರಿ ಜನವರಿಯಿಂದ ಈತನಕ ಜಿಲ್ಲೆಯಲ್ಲಿ ಸರಾಸರಿ ೧೧೮.೯೪ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೦೫.೫೫ ಇಂಚು ಮಳೆಯಾಗಿತ್ತು.

ಪ್ರಸ್ತುತ ಮಡಿಕೇರಿ ತಾಲೂಕಿಗೆ ಅತ್ಯಧಿಕ ಮಳೆಯಾಗಿದೆ. ತಾಲೂಕಿನಲ್ಲಿ ಈತನಕ ಸರಾಸರಿ ೧೬೦ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧೪೭ ಇಂಚು ಮಳೆ ಸುರಿದಿತ್ತು. ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿ ಜನವರಿಯಿಂದ ೧೪೫ ಇಂಚು ಮಳೆಯಾಗಿದೆ. ಕಳೆದ ಬಾರಿ ೧೪೪ ಇಂಚು ದಾಖಲಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಈ ಬಾರಿ ೧೦೦.೭೭ ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ೯೭ ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಈ ವರ್ಷ ೯೫.೭೭ ಇಂಚು ಹಾಗೂ ಕಳೆದ ವರ್ಷ ಜನವರಿಯಿಂದ ಈತನಕ ೭೨.೪೭ ಇಂಚಿನಷ್ಟು ಮಳೆಯಾಗಿತ್ತು.

ವರ್ಷವಿಡೀ ವಾತಾವರಣದಲ್ಲಿನ ಅಸಹಜತೆಯಿಂದಾಗಿ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗು ಇದರಿಂದಾಗಿ ನಲುಗುತ್ತಿದೆ. ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಬೆಳೆಗಾರರ ಪರಿಸ್ಥಿತಿಯಂತೂ ತೀರಾ ಕ್ಲಿಷ್ಟಕರವಾಗಿದೆ.